ಜಿಲ್ಲೆ

ಬೀದಿನಾಯಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಚಾಲನೆ

ವೀರೇಶ ಸೌದ್ರಿ

ಹಳಿಯಾಳ: ಪಟ್ಟಣದಲ್ಲಿ ಪುರಸಭೆಯಿಂದ ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮತ್ತು ರೇಬಿಸ್ ಲಸಿಕಾಕರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೆನ್ನವರ ಮನವಿ ಮಾಡಿದ್ದಾರೆ.

ಪುರಸಭೆಯಿಂದ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಬಾಮನಿಕೊಪ್ಪ ಪ್ರದೇಶದ ಬೀದಿ ನಾಯಿಗಳ ಆಶ್ರಯತಾಣದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಬೀದಿನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಮೂರು ಬಾರಿ ಟೆಂಡರ್ ಕರೆದರೂ ಪ್ರಯೋಜನವಾಗಿರಲಿಲ್ಲ. ಈ ಬಾರಿ ಸಾಕಷ್ಟು ಪ್ರಯತ್ನ ಮಾಡಿದ್ದರಿಂದ ಮಹಾರಾಷ್ಟ್ರದ ಅನಿಮಾಲ್ ವೆಲ್ಫೇರ್ ಆ್ಯಂಡ್ ಆ್ಯಂಟಿ ಹೆರಾಸಮೆಂಟ್ ಸೊಸೈಟಿಯ ಗೌರವ ಕ್ಷತ್ರೀಯ ಅವರು ತಂಡದೊಂದಿಗೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದರು.

5 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಯಿಗಳ ಶಸ್ತ್ರ ಚಿಕಿತ್ಸೆ ಬಳಿಕ ಮೂರರಿಂದ ಐದು ದಿನಗಳ ಕಾಲ ಐಸೊಲೇಷನ್‌ನಲ್ಲಿ ಇರಿಸಲಾಗುತ್ತದೆ. ನಾಯಿ ಚೇತರಿಸಿಕೊಂಡ ಬಳಿಕ ಅದನ್ನು ಎಲ್ಲಿಂದ ತರಲಾಗಿತ್ತೋ ಅಲ್ಲಿಯೇ ಬಿಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಜತೆಗೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತಿದೆ ಎಂದರು.

ಮುಂದಿನ 10 ರಿಂದ 15 ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದ್ದು 400 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಗುರಿ ಹೊಂದಲಾಗಿದೆ. ಸಾರ್ವಜನಿಕರು ತಮ್ಮ ನಾಯಿಗಳಿಗೆ ಅಥವಾ ಬಡಾವಣೆಯ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕೆಂದಿದ್ದರೆ ಪುರಸಭೆಗೆ ಸಂಪರ್ಕಿಸುವಂತೆ ಕೋರಲಾಗಿದೆ.