ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಮುಂಭಾಗ ಸಂಚರಿಸುತ್ತಿರುವ ಬಿಡಾಡಿ ದನಗಳು. 
ಜಿಲ್ಲೆ

ಬಿಡಾಡಿ ದನ, ಬೀದಿ ನಾಯಿಗಳ ಕಾಟ

ಅಭಿನಯ್ ಎಚ್.ಎಂ

ವಿರಾಜಪೇಟೆ: ನಗರದಲ್ಲಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರ ನಿದ್ರೆಗೆಡಿಸುವುದರ ಜತೆಗೆ ಆತಂಕವನ್ನು ಹೆಚ್ಚಿಸಿದೆ.

ಒಂದು ಕಡೆ ಹಗಲಿನಲ್ಲಿ ದನಗಳು ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಿದರೆ, ರಾತ್ರಿ ಸಂದರ್ಭ ಬೀದಿ ನಾಯಿಗಳು ನಗರ ಪ್ರದೇಶದ ಜನರ ನಿದ್ರೆಯನ್ನು ಕಸಿಯುತ್ತಿದೆ.

ನಗರದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ದೊಡ್ಡ ಮಟ್ಟದ ಸಮಸ್ಯೆಯನ್ನು ತಂದೊಡ್ಡಿದೆ. ದನಗಳು ಬೆಳಗ್ಗಿನಿಂದ ಸಂಜೆವರೆಗೆ ನಗರದ ಮುಖ್ಯ ರಸ್ತೆಗಳಲ್ಲಿ ಆಹಾರ ಅರಸುತ್ತ ಸಂಚರಿಸುತ್ತವೆ. ಇದರಿಂದ ಕೆಲವು ಸಂದರ್ಭ ದನಗಳ ಸಮೂಹ ಸಾಲಾಗಿ ಮುಖ್ಯರಸ್ತೆಯನ್ನು ದಾಟುವುದರಿಂದ ಅಥವಾ ಕೆಲವು ದನಗಳು ರಸ್ತೆ ನಡುವೆ ನಿಂತುಕೊಳ್ಳುವುದರಿಂದ ಹಾಗೂ ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುವುದರಿಂದ ವಾಹನ ಸವಾರರಿಗೆ ಇವುಗಳನ್ನು ದಾಟಿ ಮುಂದೆ ಸಾಗುವುದು ಸವಾಲಿನ ಕೆಲಸವಾಗಿದೆ. ಇನ್ನು ಕೆಲವು ಸಂದರ್ಭದಲ್ಲಿ ಪರಸ್ಪರ ದನಗಳು ಗುದ್ದಿಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಎರಗುವ ಸನ್ನಿವೇಶವೂ ಸೃಷ್ಟಿಯಾಗುತ್ತಿದೆ.

ಒಂದು ಕಡೆ ಬಿಡಾಡಿ ದನಗಳು, ಮತ್ತೊಂದು ಕಡೆ ಬೀದಿ ನಾಯಿಗಳ ಹಾವಳಿ ಜನರ ಪಾಲಿಗೆ ಇನ್ನಿಲ್ಲದ ಸಂಕಷ್ಟವನ್ನು ತಂದೊಡ್ಡುತ್ತಿದೆ. ಗುಂಪು ಗುಂಪಾಗಿ ಸಂಚರಿಸುವ ಇವು ವಾಹನಗಳು ಸಂಚರಿಸುವ ಸಂದರ್ಭದಲ್ಲಿ ತಕ್ಷಣ ಅಡ್ಡ ಬರುತ್ತವೆ. ಇನ್ನು ನಾಯಿಗಳು ನಾಯಿಗಳ ಮೇಲೆಯೇ ದಾಳಿ ಮಾಡುವುದು ಸಾಮಾನ್ಯವಾಗಿದ್ದು, ಇದು ಜನರಲ್ಲಿ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಹಲವು ಸಂದರ್ಭಗಳಲ್ಲಿ ಮನುಷ್ಯರು ಅಥವಾ ಚಲಿಸುವ ವಾಹನಗಳ ಮೇಲೆ ಎರಗಿ ಬಂದ ಉದಾಹರಣೆಯೂ ಇದೆ. ಹಲವು ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚರಿಸುತ್ತಿರುವಾಗ ನಾಯಿಗಳು ಏಕಾಏಕಿ ಅಡ್ಡಲಾಗಿ ಬರುವುದರಿಂದ ಸವಾರರು ಒಂದು ಕ್ಷಣ ವಿಚಲಿತರಾಗಿ ರಸ್ತೆ ಮಧ್ಯದಲ್ಲೇ ವಾಹನ ನಿಲ್ಲಿಸಿದ ಸಂದರ್ಭ ಹಿಂಬದಿ ವಾಹನ ಡಿಕ್ಕಿ ಹೊಡೆದು ಸವಾರರು ಗಾಯಗೊಂಡಿದ್ದಾರೆ.

ನಗರದ ಹೆಚ್ಚಿನ ಬೀದಿಗಳಲ್ಲಿ 5 ರಿಂದ 10 ನಾಯಿಗಳ ಸಮೂಹ ಕಾಣಸಿಗುತ್ತದೆ. ಈ ನಾಯಿಗಳ ಸಮೂಹ ರಾತ್ರಿ ಪಾಳಿಯಲ್ಲಿ ಒಂದು ನಾಯಿ ಬೊಗಳಿದರೆ ಸಾಕು ಎಲ್ಲವೂ ನಿರಂತರವಾಗಿ ಬೊಗಳಲು ಆರಂಭಿಸುತ್ತವೆ. ಒಂದು ನಾಯಿ ಗೀಳಿಟ್ಟರೆ ಉಳಿದ ನಾಯಿಗಳೂ ದನಿಗೂಡಿಸುತ್ತದೆ. ಇದರಿಂದ ನಗರ ಪ್ರದೇಶದ ಜನರು ನೆಮ್ಮದಿಯಿಂದ ರಾತ್ರಿ ವೇಳೆ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಅನಾರೋಗ್ಯ ಪೀಡಿತರು, ವೃದ್ಧರು ಹಾಗೂ ಸಣ್ಣ ಮಕ್ಕಳಿರುವ ಮನೆಗಳ ಪರಿಸ್ಥಿತಿ ಹೇಳತೀರದಾಗಿದ್ದು, ನಿತ್ಯ ಈ ಸಮಸ್ಯೆ ಅನುಭವಿಸುತ್ತ ರಾತ್ರಿ ಕಳೆಯುವ ಪರಿಸ್ಥಿತಿ ಎದುರಾಗಿದೆ.

ಕಸದ ಬುಟ್ಟಿ ಹಾಗೂ ಮನೆಯ ಹೊರಗಡೆ ಗಂಟು ಕಟ್ಟಿ ಇಡಲಾದ ಕಸದ ಗಂಟನ್ನು ಹರಿದು ಅದರಲ್ಲಿನ ಕಸವನ್ನು ಹಸುಗಳು ಹಾಗೂ ನಾಯಿಗಳು ಚೆಲ್ಲಾಡಿ ಹೋಗುವುದು ಸಾಮಾನ್ಯವಾಗಿದೆ. ಕಸದ ರಾಶಿ ಇರುವ ಕಡೆಗಳಲ್ಲಿ ಗುಂಪು ಗುಂಪಾಗಿ ನಾಯಿಗಳು ದಾಳಿ ನಡೆಸಿ ಕಸದ ಗಂಟನ್ನು ಕಚ್ಚಿ ಚೆಲ್ಲಾಪಿಲ್ಲಿ ಮಾಡುವ ಮೂಲಕ ಅನೈರ್ಮಲ್ಯ ಸೃಷ್ಟಿಸುತ್ತಿವೆ. ಕೆಲವು ದನಗಳು ಈ ಕಸದ ರಾಶಿಯಲ್ಲಿರುವ ಆಹಾರವನ್ನು ಸೇವಿಸುವ ಸಲುವಾಗಿ ಇದರಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಕಸವನ್ನು ಬುಟ್ಟಿಯಲ್ಲಿ ಹಾಕಿದ ನಂತರವೂ ನಾಯಿಗಳ ಹಿಂಡು ಮತ್ತೊಮ್ಮೆ ಅದನ್ನು ಚೆಲ್ಲಾಪಿಲ್ಲಿ ಮಾಡುವುದರಿಂದ ಮಾಡಿದ ಕೆಲಸವನ್ನೇ ಮತ್ತೊಮ್ಮೆ ಮಾಡುವಂತಹ ಸ್ಥಿತಿ ಪೌರಕಾರ್ಮಿಕರಿಗೆ ಬಂದೊದಗಿದೆ.

ಭಯದ ವಾತಾವರಣ ಸೃಷ್ಟಿ: ಪಾದಚಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚರಿಸುವ ಸಂದರ್ಭಗಳಲ್ಲಿ ನಾಯಿಗಳು ಹಾಗೂ ದನಗಳ ಸಮೂಹ ಎದುರಾಗುತ್ತದೆ. ಇದರಿಂದ ತಮಗೆ ಏನಾದರೂ ಹಾನಿಯಾಗಬಹುದು ಎಂದು ಹೆದರಿ ಸಂಚರಿಸುವ ಸ್ಥಿತಿ ತಲೆದೋರಿದೆ. ಕೆಲವು ಸಂದರ್ಭಗಳಲ್ಲಿ ದನಗಳು ಪರಸ್ಪರ ಗುದ್ದಾಡಿಕೊಂಡು ವಿದ್ಯಾರ್ಥಿಗಳ ಮೇಲೆ ಎರಗುವ ಸನ್ನಿವೇಶಗಳು ನಡೆದಿದ್ದು, ಒಟ್ಟಿನಲ್ಲಿ ನಾಯಿಗಳ ಸಮೂಹವು ಕಂಡರೆ ಓಟ ಕೀಳುವ ಪರಿಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.

ನಗರ ಪ್ರದೇಶದಿಂದ ಕಾಲೇಜು ತಲುಪುವವರೆಗೂ ರಸ್ತೆ ಬದಿ ದನಗಳು ಕಾಣಸಿಗುತ್ತವೆ. ಕೆಲವು ಸಂದರ್ಭಗಳಲ್ಲಿ ದನಗಳನ್ನು ಕಂಡಾಗ ನಾವು ಹೆದರಿಕೆಯಿಂದ ರಸ್ತೆಯ ಇನ್ನೊಂದು ಬದಿಯನ್ನು ದಾಟಿದ್ದುಂಟು. ಕೆಲವು ದಿನಗಳಲ್ಲಿ ವಾಹನ ಸಂಚಾರ ದಟ್ಟವಾಗಿರುವ ಹಿನ್ನೆಲೆಯಲ್ಲಿ ರಸ್ತೆ ದಾಟಲು ಸಾಧ್ಯವಾಗದೆ ಹೆದರಿಕೆಯಿಂದಲೇ ದನಗಳ ಸಮೂಹದ ಬಳಿ ಸಾಗಬೇಕಿದೆ.
ಬಿ.ವಿ.ಕೌಶಿಕ್ ವಿದ್ಯಾರ್ಥಿ, ವಿರಾಜಪೇಟೆ

ದನಗಳನ್ನು ಹಿಂದಕ್ಕೆ ಕರೆದುಕೊಂಡು ಹೋಗುವಂತೆ ಧ್ವನಿವರ್ಧಕದ ಮೂಲಕ ಸಾರಲಾಗಿದೆ. ಇದು ಪುರಸಭೆಯ ಮೊದಲ ಹಂತವಾಗಿದೆ. ಅರಮೇರಿ ಕಳಂಕೇರಿ ಮಠದ ಗೋಶಾಲೆಯವರು ಈ ದನಗಳನ್ನು ಸಾಕಲು ಮುಂದಾಗಿದ್ದಾರೆ. ಆದ್ದರಿಂದ ಮುಂದಿನ 15 ದಿನಗಳಲ್ಲಿ ಮಾಲೀಕರು ದನಗಳನ್ನು ತೆಗೆದುಕೊಂಡು ಹೋಗದಿದ್ದಲ್ಲಿ ಆ ದನಗಳನ್ನು ಮಠದ ಗೋಶಾಲೆಗೆ ಬಿಡಲಾಗುವುದು.
ಚಂದ್ರಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪುರಸಭೆ, ವಿರಾಜಪೇಟೆ

ಬೀದಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿಯಿಂದ ವ್ಯಾಪಾರದಲ್ಲಿ ತುಂಬ ನಷ್ಟವಾಗುತ್ತಿದೆ. ದನಗಳು ಅಂಗಡಿ ಮುಂದೆ ಕುಳಿತುಕೊಳ್ಳುವುದರಿಂದ ಸಾರ್ವಜನಿಕರು ತಮಗೇನಾದರೂ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಬೇರೆ ಕಡೆಗೆ ಹೋಗುತ್ತಿದ್ದಾರೆ. ವ್ಯಾಪಾರ ಸರಿಯಾದ ಪ್ರಮಾಣದಲ್ಲಿ ನಡೆಯುತ್ತಿಲ್ಲ .
ಟಿ.ಎನ್.ಕರಣ್ಕುಮಾರ್ ಮಾಲೀಕರು, ಆದಿಶಕ್ತಿ ಟ್ಯುಟೋರಿಯಲ್ ಮತ್ತು ಆದಿಶಕ್ತಿ ಮೆಡಿಕಲ್, ವಿರಾಜಪೇಟೆ.

.