- ಭರತ್ ಶೆಟ್ಟಿಗಾರ್, ಮಂಗಳೂರು
ದ.ಕ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಕಟ್ಟಡಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣ ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ಜಿಪಂ ನಿರ್ಣಯ ಮತ್ತು ಸಿಇಒ ಸೂಚನೆಯಂತೆ ಸಮೀಕ್ಷೆ ನಡೆದಿದ್ದು, ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಎಸ್‌ಟಿಪಿ ನಿರ್ಮಾಣವೂ ನಡೆಯುತ್ತಿದೆ.
ಗ್ರಾಪಂ ವ್ಯಾಪ್ತಿಯ ವಸತಿ ಸಮುಚ್ಚಯ, ವಾಣಿಜ್ಯ ಸಂರ್ಕೀಣಗಳ ಕಲುಷಿತ ನೀರು ತೆರೆದ ಚರಂಡಿಯಲ್ಲಿ ಹರಿಯುತ್ತಿದೆ. ಹಲವೆಡೆ ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗಿವೆ ಎಂದು ಜಿಪಂ ಸದಸ್ಯರು ಅಕ್ಟೋಬರ್ ತಿಂಗಳ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದರು. ಚರ್ಚೆ ಬಳಿಕ ಸಿಇಒ ಡಾ.ಸೆಲ್ವಮಣಿ, ಪಿಡಿಒಗಳ ಮೂಲಕ ಗ್ರಾಪಂ ವ್ಯಾಪ್ತಿಯ ಬಹುಮಹಡಿ ಕಟ್ಟಡಗಳ ಸರ್ವೇ ನಡೆಸಿ, ಅಂತಹ ಕಟ್ಟಡಗಳಲ್ಲಿ ಎಸ್‌ಟಿಪಿ ಅಳವಡಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದರು.
ಸರ್ವೇ ನಡೆಸಿರುವ ಪಿಡಿಒಗಳು ಸಿಇಒಗೆ ಪಟ್ಟಿ ಕಳುಹಿಸಿದ್ದಾರೆ. ಈ ನಡುವೆ ಎಸ್‌ಟಿಪಿ ಇಲ್ಲದ ಕೆಲವು ಕಟ್ಟಡ ಮಾಲೀಕರು ಸರ್ವೇ ನಡೆಯುತ್ತಿದ್ದಂತೆ ಘಟಕ ಅಳವಡಿಸುವ ಕೆಲಸ ಆರಂಭಿಸಿದ್ದಾರೆ. ಹೊಸ ಕಟ್ಟಡಗಳಿಗೆ ಎನ್‌ಒಸಿ ಸಿಗಬೇಕಿದ್ದರೆ ಎಸ್‌ಟಿಪಿ ಕಡ್ಡಾಯ. ಹಳೇ ಕಟ್ಟಡಗಳಲ್ಲಿ ನಿಗದಿತ ಅವಧಿಯಲ್ಲಿ ನಿರ್ಮಿಸದಿದ್ದರೆ ಪರವಾನಗಿ ರದ್ದು, ಎನ್‌ಒಸಿ ಹಿಂಪಡೆಯುವ ಕುರಿತು ಜಿಪಂ ಸೂಚನೆ ನೀಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವೇನು?
ಜಿಪಂ ತೀರ್ಮಾನಕ್ಕೂ ಮೊದಲೇ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಣಯದಂತೆ ಎಸ್‌ಟಿಪಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಗ್ರಾಪಂಗಳಿಗೆ ಆದೇಶ ನೀಡಿತ್ತು. 2015ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಗಜೆಟ್ ನೋಟಿಫಿಕೇಶನ್ ಹೊರಡಿಸಿ, 2016ರಲ್ಲಿ ಪ್ರಕಟವಾಗಿತ್ತು. ಅದರಂತೆ 2000 ಚ.ಮೀ.ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ, 20ಕ್ಕಿಂತ ಹೆಚ್ಚು ಮನೆಗಳಿರುವ ವಸತಿ ಸಮುಚ್ಚಯಗಳಿಗೆ, 5000 ಚ.ಮೀ. ಮೇಲ್ಪಟ್ಟು ವಿರ್ಸ್ತೀಣ ಇರುವ ವಿದ್ಯಾ ಸಂಸ್ಥೆಗಳ ಕಟ್ಟಡಗಳು, 10 ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ ಟೌನ್‌ಶಿಪ್‌ಗಳಲ್ಲಿ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ)ಕಾಯ್ದೆ 1974ರ ಅಡಿ ಎಸ್‌ಟಿಪಿ ಕಡ್ಡಾಯ.
ಜಿಪಂ ಸೂಚನೆಯಲ್ಲಿ ಗೊಂದಲ!
ಜಿಪಂ ಸೂಚನೆ ಪ್ರಕಾರ, ಗ್ರಾಪಂ ವ್ಯಾಪ್ತಿಯ ಎಲ್ಲ ಹಳೇ ಕಟ್ಟಡಗಳಿಗೆ ತ್ಯಾಜ್ಯ ನೀರು ಘಟಕ ಕಡ್ಡಾಯ. ಆದರೆ, ಸರ್ಕಾರದ ಆದೇಶದಲ್ಲಿ ಹೀಗಿಲ್ಲ. ಇವರರಡರ ನಡುವಿನ ವ್ಯತಾಸ ತಾಂತ್ರಿಕ ಸಮಸ್ಯೆಗೆ ಕಾರಣವಾಗಿದೆ. 2 ಸಾವಿರ ಚ.ಮೀ.ಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಕಟ್ಟಡದವರು ತ್ಯಾಜ್ಯ ಘಟಕ ನಿರ್ಮಿಸುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದರೆ ಜಿಪಂ ನಿರ್ಣಯಕ್ಕೆ ಸೋಲಾಗುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಗ್ರಾಪಂ ವ್ಯಾಪ್ತಿಯಲ್ಲಿ ಎಸ್‌ಟಿಪಿ ಇಲ್ಲದ ಕಟ್ಟಡಗಳ ಪಟ್ಟಿ ಪಡೆಯಲಾಗಿದೆ. ಅಳವಡಿಸಲು ಕಾಲಾವಕಾಶ ನೀಡಲಾಗುವುದು. ನಿಗದಿತ ಅವಧಿಯಲ್ಲಿ ಘಟಕವನ್ನು ಅಳವಡಿಸದ ಕಟ್ಟಡಗಳ ಪರವಾನಗಿ ಹಿಂಪಡೆಯಲಾಗುವುದು.
- ಡಾ.ಆರ್.ಸೆಲ್ವಮಣಿ, ಸಿಇಒ, ದ.ಕ.ಜಿಪಂ