ಅವಿನಾಶ್ ಜೈನಹಳ್ಳಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಆಚರಣೆ ಮುಗಿದಿದ್ದರೂ, ವಸ್ತುಪ್ರದರ್ಶನ ಉದ್ಘಾಟನೆಗೊಂಡು 15 ದಿನ ಕಳೆದಿದ್ದರೂ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಬಹುತೇಕ ಮಳಿಗೆಗಳು ಇನ್ನೂ ಉದ್ಘಾಟನೆಗೆ ಸಿದ್ಧವಾಗಿಲ್ಲ!
ಇಲಾಖೆ, ಜಿಲ್ಲಾ ಪಂಚಾಯಿತಿ, ನಿಗಮ-ಮಂಡಳಿಗಳ 41, ಇತರ 250 ಮಳಿಗೆಗಳನ್ನು ಈ ಬಾರಿ ವಸ್ತುಪ್ರದರ್ಶನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈ ಪೈಕಿ ವಾಣಿಜ್ಯ ಮಳಿಗೆಗಳು ಸೇವೆ ನೀಡುತ್ತಿವೆ. ಫುಡ್‌ಕೋರ್ಟ್, ಬಟ್ಟೆ ಸೇರಿದಂತೆ ವಿವಿಧ ಮಳಿಗೆಗಳು ಆರಂಭವಾಗಿವೆ. ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಯುವಜನರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಮನರಂಜನೆ ನೀಡುತ್ತಿದೆ. ಆದರೆ, ಸರ್ಕಾರಿ ಮಳಿಗೆಗಳು ಇನ್ನೂ ಕಾರ್ಯಾರಂಭ ಮಾಡದಿರುವುದು ಸಾರ್ವಜನಿಕರಿಗೆ ಬೇಸರ ತರಿಸಿದೆ.
ವಸ್ತುಪ್ರದರ್ಶನ ಗುತ್ತಿಗೆ ಪಡೆದವರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಎಲ್ಲ ವಾಣಿಜ್ಯ ಮಳಿಗೆ ಪೂರ್ಣ ಪ್ರಮಾಣದಲ್ಲಿ ಸೇವೆ ನೀಡುತ್ತಿವೆ. ವ್ಯಾಪಾರಿ ಮಳಿಗೆಗಳು ಸಿದ್ಧಗೊಂಡು ಭರ್ಜರಿ ವಹಿವಾಟು ನಡೆಸುತ್ತಿವೆ. ಆದರೆ, ಸರ್ಕಾರಿ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ ಮಳಿಗೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಖಾಸಗಿಯವರಿಗೆ ಸಾಧ್ಯವಾಗಿದ್ದು, ಸರ್ಕಾರಿ ಸಂಸ್ಥೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ದಸರಾ ಮಹೋತ್ಸವ ಆರಂಭಕ್ಕೂ 15 ದಿನಗಳ ಮುನ್ನ ಸಂಪೂರ್ಣ ಮಳಿಗೆಗಳೊಂದಿಗೆ ವಸ್ತುಪ್ರದರ್ಶನ ಉದ್ಘಾಟನೆ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವರ ಆದಿಯಾಗಿ ಅಧಿಕಾರಿಗಳು ಹೇಳಿದ್ದರೂ ಅದು ಸಾಧ್ಯವಾಗಲಿಲ್ಲ. ದಸರಾ ಮಹೋತ್ಸವದ ಉದ್ಘಾಟನೆ ದಿನವೇ ಅಪೂರ್ಣ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳುವ ಮೂಲಕ ಎಂದಿನಂತೆ ಹಳೇ ಚಾಳಿ ಮುಂದುವರಿಸಿ, ಮುಖ್ಯಮಂತ್ರಿ ನಿರ್ದೇಶನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಶಯವನ್ನು ಭಂಗಗೊಳಿಸಲಾಗಿದೆ.
ವಸ್ತುಪ್ರದರ್ಶನ ವೀಕ್ಷಣೆಗಾಗಿ ವಯಸ್ಕರಿಗೆ 30 ರೂ., ಮಕ್ಕಳಿಗೆ 20 ರೂ. ಶುಲ್ಕ ನೀಡಿ ಬಂದಿದ್ದೇವೆ. ವಾಹನ ನಿಲುಗಡೆಗೂ ಪ್ರತ್ಯೇಕ ಶುಲ್ಕ ನೀಡಿದ್ದೇವೆ. ಆದರೂ ವಸ್ತುಪ್ರದರ್ಶನದ ಆವರಣದಲ್ಲಿ ವಿವಿಧ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ ಮಳಿಗೆ ತೆರೆಯದಿರುವುದು ಬೇಸರ ಮೂಡಿಸಿತು ಎನ್ನುತ್ತಾರೆ ಪ್ರವಾಸಿಗ ಸಂತೋಷ್.
ಬೆರಳೆಣಿಕೆ ಸರ್ಕಾರಿ ಮಳಿಗೆಗಳು:
ಸರ್ಕಾರಿ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ ಒಟ್ಟು 41 ಮಳಿಗೆಗಳ ಕೈಮಗ್ಗ ಮತ್ತು ಜವಳಿ ಇಲಾಖೆಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ, ಅರಣ್ಯ ಇಲಾಖೆ ಸೇರಿದಂತೆ ಕೆಲ ಇಲಾಖೆ ಮಳಿಗೆಗಳು ಮಾತ್ರ ಪೂರ್ಣಗೊಂಡು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿವೆ.
ಕಾಪೋಸ್ಟ್ ಅಭಿವೃದ್ಧಿ ನಿಗಮ, ಮಂಡ್ಯ ಜಿಲ್ಲಾ ಪಂಚಾಯಿತಿ, ಮೈಲ್ಯಾಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಹತ್ತಾರು ಇಲಾಖೆ, ನಿಗಮ, ಮಂಡಳಿಗಳ ಮಳಿಗೆಗಳು ಸಿದ್ಧವಾಗಬೇಕಿದೆ. ಈ ಪೈಕಿ ಮಂಡ್ಯ ಜಿಲ್ಲಾ ಪಂಚಾಯಿತಿ ಮಳಿಗೆ ಸಿದ್ಧತಾ ಕೆಲಸ ಶೇ.90 ರಷ್ಟು ಪೂರ್ಣಗೊಂಡಿದೆ. ಇನ್ನುಳಿದ ಬಹುತೇಕ ಮಳಿಗೆಗಳ ಕೆಲಸ ಶೇ.50 ರಷ್ಟೂ ಆಗಿಲ್ಲ.
ಮಾಹಿತಿ ನೀಡುವ ಉದ್ದೇಶ:
ದಸರಾ ವಸ್ತುಪ್ರದರ್ಶನದಲ್ಲಿ ಮಳಿಗೆಗಳನ್ನು ತೆರೆದು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಆಯಾ ಇಲಾಖೆಗಳು, ನಿಗಮ-ಮಂಡಳಿಗಳು ತಮ್ಮ ಯೋಜನೆಗಳ ಮಾಹಿತಿ ಪ್ರದರ್ಶನ ಮಾಡುತ್ತವೆ.
ವಿಶೇಷ ಮಾದರಿಗಳಿಲ್ಲ!
ಪ್ರತಿ ಬಾರಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಜನರನ್ನು ಆಕರ್ಷಿಸುವ ಒಂದೊಂದು ಮಾದರಿಯನ್ನು ನಿರ್ಮಿಸಲಾಗುತ್ತಿತ್ತು. ಈ ಹಿಂದೆ ನಿರ್ಮಿಸಿದ್ದ ಅಮೆರಿಕದ ವೈಟ್‌ಹೌಸ್, ವೈಷ್ಣೋದೇವಿ, ಮಾನಸ ಸರೋವರ ದರ್ಶನ, ಪ್ರಪಂಚದ 7 ಅದ್ಭುತಗಳ ಮಾದರಿಗಳು ಗಮನ ಸೆಳೆದಿದ್ದವು. ಆದರೆ, ಈ ಬಾರಿ ಜನರನ್ನು ಹೆಚ್ಚು ಆಕರ್ಷಿಸುವಂತಹ ಯಾವುದೇ ಮಾದರಿ ನಿರ್ಮಾಣ ಮಾಡದೆ ಇರುವುದು ಸಾರ್ವಜನಿಕರಿಗೆ ಬೇಸರ ತರಿಸಿದೆ. ಆದರೆ, ಈ ಬಾರಿ ಸ್ವಾತಂತ್ರೃ ಸೇನಾನಿಗಳ ಮರಳಿನ (ಎಂ-ಸ್ಯಾಂಡ್) ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಲಾವಿದೆ ಗೌರಿ ಅವರು ವೀರ ಸಾವರ್ಕರ್, ಗಾಂಧಿ, ಅಂಬೇಡ್ಕರ್, ಭಗತ್‌ಸಿಂಗ್, ನೇತಾಜಿ ಅವರ ಕಲಾಕೃತಿಗಳನ್ನು ನಿರ್ಮಿಸಿರುವುದು ಗಮನ ಸೆಳೆಯುತ್ತಿದೆ. ನಟ ಪುನೀತ್ ರಾಜಕುಮಾರ್ ಅವರ 7ರಿಂದ 8 ವಿವಿಧ ಮಾದರಿಯ ಮರಳಿ ಕಲಾಕೃತಿಗಳನ್ನು ರಚಿಸಿರುವುದು ಕೊಂಚ ಆಕರ್ಷಿಸುತ್ತಿದೆ.
ದಸರಾ ವಸ್ತುಪ್ರದರ್ಶನದಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಜಿಪಂ, ನಿಗಮ-ಮಂಡಳಿಗಳ 41 ಮಳಿಗೆಗಳು ಇರಲಿವೆ. ಈ ಪೈಕಿ ಬಹುತೇಕ ಮಳಿಗೆಗಳು ಸಿದ್ಧಗೊಂಡಿವೆ. ಉಳಿದ ಮಳಿಗೆಗಳೂ ಆದಷ್ಟು ಬೇಗ ಪೂರ್ಣಗೊಳ್ಳಲಿವೆ. ವಾಣಿಜ್ಯ ಮಳಿಗೆಗಳು ಪೂರ್ಣಗೊಂಡು ಸೇವೆ ನೀಡುತ್ತಿವೆ. ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಎಲ್ಲರೂ ಮನರಂಜನೆ ಪಡೆಯುತ್ತಿದ್ದಾರೆ.ಕೆ.ರುದ್ರೇಶ್ ಸಿಇಒ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ