ತೊಮಿಯಾರ್‌ಪಾಳ್ಯದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಹೊನ್ನೂರು ಪ್ರಕಾಶ್, ಕರಿಯಪ್ಪ, ಮಾದಪ್ಪ ಇತರರು ಇದ್ದರು. 
ಜಿಲ್ಲೆ

ಅಕ್ರಮ ಮದ್ಯ ಮಾರಾಟ, ಭ್ರಷ್ಟಾಚಾರಕ್ಕೆ ತಡೆಯೊಡ್ಡಿ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು: ತೊಮಿಯಾರ್‌ಪಾಳ್ಯ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಇ ಸ್ವತ್ತು ನೀಡಲು ಲಂಚ ಪಡೆಯುತ್ತಿದ್ದು ಕೂಡಲೇ ಈ ದಂಧೆಗೆ ಕಡಿವಾಣ ಹಾಕುವಂತೆ ರೈತ ಸಂಘದ ಹನೂರು ಗ್ರಾಮ ಘಟಕದ ಅಧ್ಯಕ್ಷ ಮಾದಪ್ಪ ತಿಳಿಸಿದರು.

ತಾಲೂಕಿನ ತೊಮಿಯಾರ್‌ಪಾಳ್ಯ ಗ್ರಾಮದಲ್ಲಿ ಗುರುವಾರ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಆಯೋಜಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತೊಮಿಯಾರ್‌ಪಾಳ್ಯ ಗ್ರಾಮದ ಕೆಲವು ಅಂಗಡಿಗಳಲ್ಲಿ ಹಲವು ತಿಂಗಳಿನಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇತ್ತೀಚಿಗೆ ವಿಪರೀತವಾಗಿದೆ. ಇದರಿಂದ ಶಿಕ್ಷಣ ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಶಾಲಾ, ಕಾಲೇಜಿನ ಮಕ್ಕಳು ಸಹ ಮದ್ಯದ ಚಟಕ್ಕೆ ಒಳಗಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಆದರೆ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಈ ಕೂಡಲೇ ಕ್ರಮವಹಿಸಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಇನ್ನು ಶಾಗ್ಯ ಗ್ರಾಪಂನಲ್ಲಿ ಇ ಸ್ವತ್ತು ಪಡೆಯಬೇಕಾದರೆ ಇಲ್ಲಿನ ಅಧಿಕಾರಿಗಳು ಜನರಿಂದ ಲಂಚವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಜನರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಹಾಗೆಯೇ ಗ್ರಾಮಕ್ಕೆ ವೈದ್ಯರನ್ನು ನಿಯೋಜಿಸುವಂತೆ ಒತ್ತಾಯಿಸಿದರು.

ಇದಕ್ಕೆ ಗ್ರಾಪಂ ಕಾರ್ಯದರ್ಶಿ ದಾಸ್ ಪ್ರತಿಕ್ರಿಯಿಸಿ, ಅಧಿಕಾರ ವಹಿಸಿಕೊಂಡು 25 ದಿನವಾಗಿದೆಯಷ್ಟೇ. ಹಾಗಾಗಿ ಈ ಬಗ್ಗೆ ಮಾಹಿತಿ ಇಲ್ಲ. ಪಿಡಿಒ ಅವರ ಗಮನಕ್ಕೆ ತಂದು ಸರ್ಕಾರದ ಶುಲ್ಕವನ್ನು ಮಾತ್ರ ಪಡೆದುಕೊಂಡು ನಿಗಧಿತ ಅವಧಿಯೊಳಗೆ ಇ ಸ್ವತ್ತು ನೀಡುವುದಾಗಿ ತಿಳಿಸಿದರು. ಪೊಲೀಸ್ ಪೇದೆಯೊಬ್ಬರೂ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಅವರು ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮವಹಿಸಲಾಗಿದೆ. ಗ್ರಾಮಕ್ಕೆ ಸದ್ಯ ವೈದ್ಯರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆಯೊಂದಿಗೆ ಸಂಘಟಿತರಾಗಿ: ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಹನೂರು ಭಾಗದಲ್ಲಿ ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನಲೆ ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇತ್ತ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದ್ದು, ರೈತರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಆದ್ದರಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹಾಗೂ ಸರ್ಕಾರದಿಂದ ಸವಲತುಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟನೆಯೊಂದಿಗೆ ಪ್ರತಿಯೊಬ್ಬರೂ ಸಂಘಟಿತರಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ಪದಾಧಿಕಾರಿಗಳಾದ ಡೇವಿಡ್, ವಿನ್ಸೆಂಟ್, ಮಾದಪ್ಪ ಹಾಗೂ ಇನ್ನಿತರರು ಇದ್ದರು.