ಉಡುಪಿ: ಕೌಟುಂಬಿಕ ಜೀವನದಲ್ಲಿ ಉಂಟಾಗುವ ಮನಸ್ತಾಪಗಳಿಂದ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಹಾಳಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಉತ್ಸಾಹಿಗಳು ಹಮ್ಮಿಕೊಂಡ ಸ್ಟಾಪ್ ವೈಲೆನ್ಸ್ ಬೈಕ್ ಜಾಥಾ ಶ್ಲಾನೀಯವಾಗಿದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ "ಹಿಂಸೆ ನಿಲ್ಲಿಸಿ' ಜನಜಾಗೃತಿ ಬೈಕ್ ಜಾಥಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ಟಾಪ್ ವೈಲೆನ್ಸ್ ಘೋಷವಾಕ್ಯದೊಂದಿಗೆ ಕರ್ನಾಟಕ, ಗೋವಾ ಮಹಾರಾಷ್ಟ್ರ ಸೇರಿ 3 ಸಾವಿರ ಕಿಮೀ ಬೈಕ್ ಜಾಥಾ ನಡೆಸಿರುವುದು ಸಣ್ಣ ಸಾಧನೆಯಲ್ಲ. ಯುವಕರು ಹಿಂಸೆ, ದುಶ್ಚಟ, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಬೈಕ್ ಸವಾರರಾದ ದೃಶ್ ಕೊಡಗು ಮತ್ತು ಉಜ್ವಲ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಎಎಸ್ಪಿ ಪಿ.ಎ. ಹೆಗಡೆ, ಉದ್ಯಮಿ ರಂಜನ್ ಕಲ್ಕೂರ್, ರೋಟರಿ ಗವರ್ನರ್ ಸಿಎ ದೇವಾನಂದ್, ಸುದೀಪ್ಕುಮಾರ್ ಮಂಜ, ಪ್ರಭಾಕರ ಪೂಜಾರಿ, ಸುರೇಶ್ ಸುವರ್ಣ ಕುರ್ಕಾಲು, ರಮಾಕಾಂತ ಪೂಜಾರಿ, ರಂಜಿತಾ ಶೇಟ್ ಉಪಸ್ಥಿತರಿದ್ದರು. ಬಾಸುಮ ಕೊಡಗು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.