ಜಿಲ್ಲೆ

ಅನಗತ್ಯ ಮಾರ್ಷಲ್ ಸೇವೆ ಸ್ಥಗಿತಗೊಳಿಸಿ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ರಿಂದ ಡಿಸಿಎಂಗೆ ಪತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವ ಮಾರ್ಷಲ್‌ಗಳ ಸೇವೆಗೆ ಅಗತ್ಯಕ್ಕಿಂತ ಹೆಚ್ಚಿನನವರನ್ನು ನೇಮಿಸಿಕೊಂಡು ಪಾಲಿಕೆಗೆ ನಷ್ಟ ಉಂಟು ಮಾಡಲಾಗಿದೆ. ಇದರಿಂದ ಕೋಟ್ಯಂತರ ರೂ. ಆಗಲಿರುವ ಹಿನ್ನೆಲೆಯಲ್ಲಿ ಅನಗತ್ಯ ಮಾರ್ಷಲ್‌ಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಡಿಸಿಎಂಗೆ ಪತ್ರ ಬರೆದಿದ್ದಾರೆ.

2017ರಲ್ಲಿ ಪ್ರತೀ ವಾಡ್‌ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ ಎನ್‌ಸಿಸಿ ತರಬೇತಿ ಪೂರ್ಣಗೊಳಿಸಿದವರನ್ನು ಮಾರ್ಷಲ್ ಹೆಸರಿನಲ್ಲಿ ನಿಯೋಜಿಸಿಕೊಳ್ಳಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇವರನ್ನು ಪಾಲಿಕೆ ಕಚೇರಿಗಳು, ಪ್ರಹರಿ ದಳ, ಮಾರುಕಟ್ಟೆಗಳು ಮತ್ತು ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ ಮಾರ್ಷಲ್ಗಳನ್ನು ನಿಯೋಜಿಸಲಾಗಿತ್ತು. ಜತೆಗೆ ಇಂದಿರಾ ಕ್ಯಾಂಟೀನ್‌ಗಳು, ಜಯನಗರ ವಾಣಿಜ್ಯ ಸಂಕೀರ್ಣ, ಬೆಳ್ಳಂದೂರು ಕೆರೆ, ವರ್ತೂರು ಕೆರೆ ಸಹಿತ ಒಟ್ಟಾರೆಯಾಗಿ 750 ಮಂದಿಗೆ ಏರಿಸಲಾಗಿದೆ. ಈ ಪೈಕಿ 18 ಮಂದಿ ವಾರ್ಡ್ ಸೂಪರ್‌ವೈಸರ್‌ಗಳು, 9 ಮಂದಿ ಹೆಚ್ಚುವರಿ ವಾರ್ಡ್ ಸೂಪರ್‌ವೈಸರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಇದರನ್ವಯ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಗೆ 684 ಮಂದಿ ಮಾರ್ಷಲ್ಗಳಿಗೆ ಮಾಸಿಕ ತಲಾ 25 ಸಾವಿರ ರೂ., ಕೆರೆ ಭದ್ರತೆ ಕಾರ್ಯದಲ್ಲಿರುವ 42 ಮಂದಿಗೆ ಮಾಸಿಕ ತಲಾ 28875, ಭೂಭರ್ತಿ ಕೇಂದ್ರಗಳಲ್ಲಿರುವವ 24 ಮಂದಿಗೆ ಮಾಸಿಕ ತಲಾ 29462, 18 ಮಂದಿ ಜೆಸಿಒಗಳಿಗೆ ಮಾಸಿಕ ತಲಾ 45475, ಮತ್ತು 9 ಮಂದಿ ಹೆಚ್ಚುವರಿ ವಾರ್ಡ್ ಸೂಪರ್‌ವೈಸರ್‌ಗಳಿಗೆ ಮಾಸಿಕ ತಲಾ 35000, ವೇತನ ನೀಡಲಾಗುತ್ತಿದೆ. ಇದರಿಂದ ಪ್ರತೀ ತಿಂಗಳು ಒಟ್ಟು 2,01,53,388 ರೂ.ನಂತೆ ವಾರ್ಷಿಕ 24,18,40,656 ರೂ. ಮೊತ್ತವನ್ನು ವ್ಯಯಿಸಲಾಗುತ್ತಿದೆ. 2017ರಿಂದ ಈವರೆಗಿನ ಆರೂವರೆ ವರ್ಷಗಳಲ್ಲಿ ಮಾರ್ಷಲ್ಗಳ ಸೇವೆಗೆ ಒಟ್ಟಾರೆ 157.19 ಕೋಟಿ ರೂ. ಬೃಹತ್ ಮೊತ್ತದ ತೆರಿಗೆ ಹಣವನ್ನು ವೆಚ್ಛ ಮಾಡಲಾಗಿದೆ. ಮಾರ್ಷಲ್ಗಳ ನಿಯೋಜನೆಯಿಂದ ಪಾಲಿಕೆಯ ಸೇವೆಯಲ್ಲಿ ಸುಧಾರಣೆ ಆಗದಿದ್ದರೂ, ವಾಷಿರ್ಕ ಕೋಟ್ಯಂತರ ರೂ. ಅನಗತ್ಯವಾಗಿ ಪೋಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಸಿದ್ದಾರೆ.

ವಿಶೇಷವೆಂದರೆ ಪಾಲಿಕೆ ಪ್ರತಿ ಮಾರ್ಷಲ್ಗೆ ಪಾವತಿಸುವ ಮಾಸಿಕ 25 ಸಾವಿರ ರೂ. ಪೈಕಿ ಕೇವಲ 17 ಸಾವಿರ ರೂ. ಮಾತ್ರ ಬಟವಾಡೆ ಆಗುತ್ತಿದೆ. ಪಾಲಿಕೆ ಸಿಬ್ಬಂದಿ ಹೊರತಾಗಿಯೂ 750 ಮಾರ್ಷಲ್ಗಳ ಸೇವೆ ಅಗತ್ಯವಿದೆಯೇ ಎಂಬುದನ್ನು ಪರಾಮರ್ಶೆಗೆ ಒಳಪಡಿಸಬೇಕು. ತಪ್ಪು ನುಸುಳಿದ್ದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಕಳೆದ ಆರೂವರೆ ವರ್ಷದಿಂದ ನಿರಂತರವಾಗಿ ಬಿಬಿಎಂಪಿಯಲ್ಲಿ ಒಂದಕ್ಕೆ ಎರಡು ಪಟ್ಟು ಸಂಖ್ಯೆ ತೋರಿಸಿ ಮಾರ್ಷಲ್ಗಳ ಸೇವೆಯ ಹೆಸರಿನಲ್ಲಿ ಲೂಟಿ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ ಬೆಂಗಳೂರು ಉಸ್ತುವಾರಿ ಸಚಿವರು, ಆಡಳಿತಾಧಿಕಾರಿಗಳು ಮತ್ತು ಮುಖ್ಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರು ನೀಡಲಾಗಿದೆ. ನಾಗರಿಕರ ತೆರಿಗೆ ಹಣ ಉಳಿಸಲು ಅನಗತ್ಯ ಮಾರ್ಷಲ್‌ಗಳ ಸೇವೆಯನ್ನು ತಡೆಹಿಡಿಯಲಿ.

- ಎನ್.ಆರ್.ರಮೇಶ್, ಬಿಜೆಪಿ ಮುಖಂಡ