ಪಿರಿಯಾಪಟ್ಟಣ: ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಆರ್.ಯೋಗೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಅರೋಗ್ಯ ಇಲಾಖೆ, ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಎಂಬುದು ಅತ್ಯಂತ ಅಮೂಲ್ಯವಾದ ಸಮಯವಾಗಿದ್ದು ಯಾವುದೇ ರೀತಿಯ ಚಂಚಲತೆಗೆ ಒಳಗಾಗದೆ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಪರಿಶ್ರಮದಿಂದ ಅಭ್ಯಸಿಸಿ ನಿರ್ದಿಷ್ಟವಾದ ಗುರಿ ತಲುಪುವುದು ವಿದ್ಯಾರ್ಥಿಗಳ ಧ್ಯೇಯವಾಗಬೇಕಿದೆ ಎಂದರು.
ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಸೇರಿದಂತೆ ವಿವಿಧ ರೀತಿಯ ದುಶ್ಚಟಗಳು ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲಿದ್ದು, ಯುವ ಜನತೆ ಅತ್ಯಂತ ಎಚ್ಚರಿಕೆಯಿಂದ ಇರಬೇಕಿದೆ ಎಂದರು.
ಶಾಲಾ, ಕಾಲೇಜುಗಳ ಸಮೀಪದಲ್ಲಿ ಮಾದಕ ವಸ್ತುಗಳ ಮಾರಾಟ ಶಿಕ್ಷಾರ್ಹ ಅಪರಾಧವಾಗಿದ್ದು ಯುವಜನತೆ ಮಾದಕ ವಸ್ತುಗಳ ಮಾರಾಟದ ತಡೆಗೆ ಶ್ರಮಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಕ್ಷಣಿಕ ಸುಖ ನೀಡುವ ದುಶ್ಚಟಗಳು ಜೀವಕ್ಕೆ ಮರಣಾಂತಿಕವಾಗಿದ್ದು ಆರೋಗ್ಯಪೂರ್ಣವಾದ ಶರೀರವನ್ನು ಅನಾರೋಗ್ಯದ ಕಡೆಗೆ ಕೊಂಡೊಯುತ್ತದೆ ಎಂದರು. ಇತ್ತೀಚಿಗೆ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಮೋಜು ಮಸ್ತಿಗೆ ಧೂಮಪಾನ, ಮದ್ಯಪಾನ ಮಾಡುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸ್ ನಿರೀಕ್ಷಕ ಗೋವಿಂದ ರಾಜು ಮತ್ತು ತಾಲೂಕು ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆ ವಿರೋಧಿಸುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮುರಳಿ, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್.ಪ್ರಕಾಶ್, ಉಪನ್ಯಾಸಕರಾದ ಕುಮಾರ್, ಐಶ್ವರ್ಯಾ, ದೀಪಾಂಜಲಿ, ಪವಿತ್ರಾ, ಬಸವರಾಜ್, ಆರೋಗ್ಯ ಸುರಕ್ಷಾ ಸಮಿತಿ ಸದಸ್ಯೆ ಚನ್ನಮ್ಮ, ಸಿಬ್ಬಂದಿ ಲತಾ, ವಿಶ್ವನಾಥ್, ಮಹದೇವ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.