ಜಿಲ್ಲೆ

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ತಡೆಯಿರಿ

ಉತ್ತರ ಕನ್ನಡ ಡೆಸ್ಕ್

ರಟ್ಟಿಹಳ್ಳಿ: ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ದೂರು ಕೇಳಿಬಂದಿವೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ವಸಂತಕುಮಾರ ಬಿ. ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆಯಾಗುವ ಪಡಿತರ ಧಾನ್ಯಗಳಲ್ಲಿ ತೂಕದ ವಂಚನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು ಸೂಚಿಸಿದರು.

ಆಹಾರ ಇಲಾಖೆ ಅಧಿಕಾರಿ ಚಂದ್ರಶೇಖರ ಯದ್ದಳ್ಳಿ ಮಾತನಾಡಿ, 2021-25ರವರೆಗೆ ಹೊಸದಾಗಿ 1777 ಅರ್ಜಿ ಬಂದಿದ್ದು, 1205 ಅರ್ಜಿ ವಿಲೇವಾರಿ ಮಾಡಲಾಗಿದೆ. 206 ತಿರಸ್ಕೃತಗೊಂಡಿವೆ. 366 ಬಾಕಿ ಉಳಿದಿವೆ. ತಾಲೂಕಿ 2 ನ್ಯಾಯಬೆಲೆ ಅಂಗಡಿಗಳಲ್ಲಿ ತೂಕ ಅಳತೆಯಲ್ಲಿ ಮೋಸವಾಗಿರುವುದನ್ನು ಪರಿಶೀಲಿಸಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಆಡಳಿತಾಧಿಕಾರಿ ಬಿ.ವಸಂತಕುಮಾರ ಪ್ರತಿಕ್ರಿಯಿಸಿ, ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಎಂದು ಸೂಚಿಸಿದರು.

ತುಂಗಾ ಮೇಲ್ದಂಡೆ ಯೋಜನೆಯ ಉಪವಿಭಾಗ ಅಧಿಕಾರಿ ಯು. ಹನುಮಂತಪ್ಪ ಮಾತನಾಡಿ, ಗುಡ್ಡದಮಾದಾಪುರ ಮತ್ತು ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು, ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಸರ್ವಜ್ಞ ಮತ್ತು ಬುಳ್ಳಾಪುರ ಹಾಡೆ ಕೆರೆ ತುಂಬಿಸುವ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಜುಲೈ ವೇಳೆಗೆ ಪೂರ್ಣಗೊಳ್ಳುತ್ತದೆ. ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಮುಖ್ಯ ಕಾಲುವೆಗಳ ಬದಿಯಲ್ಲಿ ಜಂಗಲ್ ಕಟಾವು, ಕಾಲುವೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಹಾಯಕ ಕೃಷಿ ನಿರ್ದೇಶಕ ಜಿತೇಂದ್ರ ಗೌಡಪ್ಪಳವರ ಮಾತನಾಡಿ, ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರಿನ ಬಿತ್ತನೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅವಶ್ಯವಿರುವ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಮಾತನಾಡಿ, ರಟ್ಟಿಹಳ್ಳಿ ತಾಲೂಕಿನಲ್ಲಿ ಅನುದಾನಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಂಠಿತವಾಗಿದೆ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿರುವುದರಿಂದ ಫಲಿತಾಂಶಕ್ಕೆ ಹಿನ್ನೆಡೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಉತ್ತಮವಾಗಿದೆ ಎಂದರು.

ಆರೋಗ್ಯ ವೈದ್ಯಾಧಿಕಾರಿ ಡಾ.ಲೋಕೇಶಕುಮಾರ ಮಾತನಾಡಿ, ಮಲೇರಿಯಾ, ಡೆಂಘೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೆಲವು ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ಮನೆಗಳಿಗೆ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂಬ ಮಾಹಿತಿ ಇದೆ. ಈ ಯೋಜನೆಗಳಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಬಿ.ವಸಂತಕುಮಾರ ಸೂಚಿಸಿದರು.

ತಾಪಂ ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ, ತಾಪಂ ಲೆಕ್ಕಾಧಿಕಾರಿ ದಿನೇಶ ಟಿ.ಎಚ್., ಪ್ರದೀಪ ಗಣೇಶಕರ, ದೇವರಾಜ ಸಣ್ಣಕಾರ್ಗೆರ, ಮಂಜುನಾಥ ಹಿತ್ತಲಮನಿ, ಬಸವರಾಜ ಚಂದಳ್ಳೇರ, ಲಿಂಗರಾಜ ಹೊಗೆಸೊಪ್ಪಿನವರ ಉಪಸ್ಥಿತರಿದ್ದರು.