ಮೈಸೂರು: ಸುಮ್ಮನೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದನ್ನು ಬಿಟ್ಟು ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ತಡವಾಗಿ ಪತ್ರ ಬಂತು’ ಎಂಬ ವಿದೇಶಾಂಗ ಸಚಿವ ಜೈ ಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು 15 ದಿನಗಳ ಹಿಂದೆಯೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಆದರೆ ಪತ್ರಕ್ಕೆ ಇದುವರೆವಿಗೂ ನನಗೆ ಉತ್ತರವೇ ಬಂದಿಲ್ಲ. ಇಂತಹ ಹೇಳಿಕೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಅಷ್ಟೆ. ಒಂದು ವೇಳೆ ನಾನು ಪತ್ರ ಬರೆದದ್ದು ತಡವೇ ಅಗಿದ್ದರೂ ಪತ್ರ ತಲುಪಿದ ಬಳಿಕ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಹೇಳಿ ಎಂದು ಪ್ರಶ್ನಿಸಿದರು.
ಆರೋಪ, ಪ್ರತ್ಯಾರೋಪ ಮಾಡುತ್ತಾ ಸುಮ್ಮನೆ ಕಾಲ ಕಳೆಯುವುದನ್ನು ಬಿಟ್ಟು ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ರದ್ದು ಮಾಡಲಿ ಎಂದು ಒತ್ತಾಯಿಸಿದರು.
ವಿಡಿಯೋ ಹಂಚಿದ್ದು ದೊಡ್ಡ ಅಪರಾಧವೇ?: ಅತ್ಯಾಚಾರಕ್ಕಿಂತ ಅದರ ವಿಡಿಯೋ ಹಂಚಿದು ದೊಡ್ಡ ಅಪರಾಧವೇ? ಹಾಗೆಂದು ಯಾವ ಕಾನೂನಿನಲ್ಲಿ ಇದೆ ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಅತ್ಯಾಚಾರಕ್ಕಿಂತ ವಿಡಿಯೋ ಹಂಚಿರುವುದು ದೊಡ್ಡ ಅಪರಾಧ ಅಂತ ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳುತ್ತಾರೆಯೇ? ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯೇ ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ ಹೇಳಿ ಎಂದು ವ್ಯಂಗ್ಯವಾಡಿದರು.
ವಿಡಿಯೋ ವಿತರಣೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಅತ್ಯಾಚಾರ ಮಾಡಿದ್ದಕ್ಕಿಂತ ವಿಡಿಯೋ ಹಂಚಿದ್ದೇ ಮಹಾ ಅಪರಾಧ ಎನ್ನುವುದು ಸರಿಯಲ್ಲ. ಅತ್ಯಾಚಾರ ಮಾಡಿ, ವಿಡಿಯೋ ಮಾಡಿದ್ದು ಅಪರಾಧ ಅಲ್ಲವೇ ಎಂದು ಗುಡುಗಿದರು.
ನನ್ನ ಮಗ ರಾಕೇಶ್ ಸತ್ತು ಹೋಗಿ 8 ವರ್ಷ ಆಗಿದೆ. ಈಗ ಆ ವಿಚಾರವನ್ನು ಯಾವುದಕ್ಕೋ ಲಿಂಕ್ ಮಾಡಿ ಮಾತನಾಡುವುದು ಮೂರ್ಖತನ. ಅವರ ಅಣ್ಣನ ಮಗ ರೇಪ್ ಮಾಡಿ ಓಡಿ ಹೋಗಿರುವುದು, ಅದಕ್ಕೂ 2016ರಲ್ಲಿ ಸತ್ತು ಹೋದ ರಾಕೇಶ್‌ವಿಚಾರಕ್ಕೂ ಏನು ಸಂಬಂಧ ಎಂದು ಕಿಡಿಕಾರಿದರು.
ದಾವಣಗೆರೆ ಪ್ರಕರಣದಲ್ಲಿ ಇಬ್ಬರ ಅಮಾನತು
ದಾವಣಗೆರೆ ಯುವಕನ ಸಾವು ಪ್ರಕರಣ ಲಾಕಪ್ ಡೆತ್ ಅಲ್ಲ. ಆದರೆ ಠಾಣೆಗೆ ಕರೆದುಕೊಂಡು ಬಂದ ರೀತಿಯಲ್ಲಿ ಲೋಪವಾಗಿರುವುದರಿಂದ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ ಅವರನ್ನು ಅಮಾನತು ಮಾಡಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚನ್ನಗಿರಿ ಬಳಿಯ ಟಿಪ್ಪುನಗರದ ಅದೀಲ್‌ನನ್ನು ಮಟ್ಕಾ ದಂಧೆ ಆರೋಪದಡಿ ಠಾಣೆಗೆ ಕರೆತರಲಾಗಿತ್ತು. ಆತನಿಗೆ ಮೂರ್ಛೆ ರೋಗದ ಜತೆಗೆ ರಕ್ತದೊತ್ತಡ ಕಡಿಮೆ ಆಗಿದ್ದರಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ ಎಫ್‌ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ. ಆದರೆ ಈ ಇದು ಲಾಕಪ್ ಡೆತ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.