ಮೊಳಕಾಲ್ಮೂರು: ಬಿಜೆಪಿ ಆಡಳಿತದಲ್ಲಿ ಜಾರಿಗೊಳಿಸಿದ್ದ ಜನಪರ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ತಡೆ ಹಾಕುವ ಮೂಲಕ ಜನವಿರೋಧಿ ನೀತಿಯಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಚೇರಿಯಿಂದ ತಾಲೂಕು ಆಡಳಿತ ಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಬಸ್ ನಿಲ್ದಾಣದಲ್ಲಿ ಮಾರವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾ ನಿಧಿ, ಕಿಸಾನ್ ಕ್ರಡಿಟ್ ಕಾರ್ಡ್, ಜಿಲ್ಲೆಗೊಂದು ಗೋಶಾಲೆ, ಗೋಹತ್ಯೆ ತಡೆ, ಭೂ ಸಿರಿ, ಶ್ರಮ ಶಕ್ತಿ, ಕ್ಷೀರ ಸಮೃದ್ಧಿ, ಎಪಿಎಂಸಿ ಕಾಯ್ದೆ ಸೇರಿ ಅನೇಕ ಯೋಜನೆಗಳನ್ನು ದ್ವೇಷದ ಕಾರಣಕ್ಕೆ ವಿರೋಧಿಸುತ್ತಿರುವುದು ಸರಿಯಲ್ಲ ಎಂದರು.
ಕೈಯಲ್ಲಿ ಕಾಸಿಲ್ಲ, ಚಂದ್ರಲೋಕ ತೋರಿಸಲಾಗುವುದು ಎಂಬ ಭ್ರಮೆಯನ್ನು ಜನರಲ್ಲಿ ಭಿತ್ತುವ ಕಾರ್ಯದಲ್ಲಿಯೇ ಹೆಚ್ಚು ಆಸಕ್ತಿ ತೋರುತ್ತಿರುವ ರಾಜ್ಯ ಸರ್ಕಾರ, ಆಡಳಿತದಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿದರು.
ರಾಜ್ಯದ 134 ತಾಲೂಕುಗಳಲ್ಲಿ ತೀವ್ರತರ ಬರಗಾಲ ಎದುರಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳದೆ ಕಾಲಹರಣ ಮಾಡಲಾಗುತ್ತಿದೆ ಎಂದು ದೂರಿದ ಮುಖಂಡರು, ಜಲಾಶಯಗಳಲ್ಲಿನ ನೀರಿನ ಬಳಕೆ ಮಿತ ನೀತಿ ಅಳವಡಿಸಿಕೊಳ್ಳಬೇಕು ಹಾಗೂ ಲೋಡ್ ಶೆಡ್ಡಿಂಗ್‌ಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಮುಖಂಡರಾದ ರಾಮರಡ್ಡಿ, ಮಲ್ಲೇಶ, ನಾಗರಾಜ್, ಕಿರಣ್, ಟಿ.ರವಿಕುಮಾರ, ಕೆ.ತಿಪ್ಪೇಸ್ವಾಮಿ, ಹೇಮಂತಕುಮಾರ, ಪ್ರಭಾಕರ, ಸಿದ್ದಾರ್ಥ, ಮೂರ್ತಿ, ಮರಿಸ್ವಾಮಿ, ವೆಂಕಟೇಶ್, ರಂಗಪ್ಪ, ಧರಣೇಂದ್ರ, ಚಂದ್ರಣ್ಣ, ಗಂಗಣ್ಣ, ಶಿವಣ್ಣ, ಪಿ.ಲಕ್ಷ್ಮಣ, ಗೋವಿಂದಪ್ಪ, ಪ್ರಕಾಶರಡ್ಡಿ, ಲಕ್ಷ್ಮೀ, ಹರೀಶ್ ಇದ್ದರು.