ಜಿಲ್ಲೆ

ಸರ್ಕಾರಿ ಶಾಲಾ, ಕಾಲೇಜುಗಳ ಬಗ್ಗೆ ಕೀಳರಿಮೆ ಬಿಡಿ

ಕಿರಣ್ ಗೌಡ.ಜಿ

ಹುಣಸೂರು: ದಲಿತ ಮಹಿಳಾ ಒಕ್ಕೂಟ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕ ಕಟ್ಟೆಮಳಲವಾಡಿ ಮಹದೇವಮ್ಮ, ಸರ್ಕಾರಿ ಶಾಲೆಗಳಿಂದಲೇ ಈ ನಾಡಿನ ಪ್ರತಿಭೆಗಳು ರೂಪುಗೊಂಡಿವೆ. ಹಾಗಾಗಿ, ಸರ್ಕಾರಿ ಶಾಲೆಗಳಲ್ಲಿ ಉತ್ಕೃಷ್ಟ ದರ್ಜೆಯ ಬೋಧನಾ ವ್ಯವಸ್ಥೆ ಇದೆ, ಪರಿಣತಿ ಹೊಂದಿರುವ ಶಿಕ್ಷಕರ ಸಮೂಹವಿದೆ. ಈವರೆಗೆ ನಾಡಿನ ಪ್ರತಿಭೆಗಳು ಅನಾವರಣ ಗೊಂಡಿರುವ ಪ್ರತಿಭೆಗಳು ರೂಪುಗೊಂಡಿರುವುದು ಸರ್ಕಾರಿ ಶಾಲೆಗಳಲ್ಲಿಯೇ, ಹೀಗಿರುವಾಗ ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳ ಬಗೆಗೆ ಅಸಡ್ಡೆ ಬೆಳೆದು ಬಂದಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ಓದಿಸುವುದು ಅಪಮಾನ ಎನ್ನುವ ಮನಸ್ಥಿತಿ ನೆಲೆಸಿದೆ. ಈ ಕೀಳರಿಮೆಯನ್ನು ತೊಡೆದು ಹಾಕಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪಾಲಕರು ಮುಂದಾಗುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸುಧಾಮಣಿ ವಹಿಸಿದ್ದರು. ಅಹಿಂದ ತಾಲೂಕು ಅಧ್ಯಕ್ಷ ಡೇವಿಡ್ ರತ್ನಪುರಿ, ಮುಖಂಡರಾದ ಸೋಮಯ್ಯ, ಜಾನ್ ಕ್ರಿಸ್ಟೋಫರ್, ನಿವೃತ್ತ ಸರ್ಕಾರಿ ನೌಕರ ಸಿ ಪುಟ್ಟಮಲ್ಲು, ಜೆ.ಮಹದೇವ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಪ್ರಕಾಶ್ ಎಂ ಆರ್ ಹೊಸಳ್ಳಿ, ಕೊಳಗಟ್ಟ ಕೃಷ್ಣ, ಹನುಮಯ್ಯ, ಪ್ರಾಧ್ಯಾಪಕ ಶಾಂತಕುಮಾರ್ ಸೇರಿದಂತೆ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

28ಊಓ5: ಹುಣಸೂರು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಟ್ಟೆಮಳಲವಾಡಿ ಮಹದೇವಮ್ಮ, ಪ್ರಾಂಶುಪಾಲೆ ಸುಧಾಮಣಿ, ಜೆ.ಮಹದೇವ್, ಡೇವಿಡ್ ರತ್ನಪುರಿ ಇತರರಿದ್ದಾರೆ.