ಜಿಲ್ಲೆ

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬೀಳಲಿ ತಡೆ

ರೇಷ್ಮೆ ನಗರ ಡೆಸ್ಕ್

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್

 ಕನಕಪುರ: ಸಾತನೂರು ಹೋಬಳಿ ಕಬ್ಬಾಳು ಗ್ರಾಮದ ಸರ್ಕಾರಿ ಖರಾಬುಕಟ್ಟೆ ಆವರಣದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಕೂಡಲೇ ತಡೆಹಿಡಿದು, ಜಾಗವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ನೀಡಿ ಮಾತನಾಡಿ, ಕಬ್ಬಾಳು ಗ್ರಾಮದ ಸ. ನಂ.2ರಲ್ಲಿ 1.15 ಎಕರೆ ಸರ್ಕಾರಿ ಕಟ್ಟೆ ಆವರಣದಲ್ಲಿ ಕಬ್ಬಾಳು ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ, ಶೌಚಗೃಹ ಮತ್ತು ನೆಮ್ಮದಿ ಕೇಂದ್ರ ಕಟ್ಟಡಕ್ಕೆ ಗುತ್ತಿಗೆ ನೀಡಿ, ಸರ್ಕಾರಿ ಖರಾಬಿನ ಕಟ್ಟೆಯನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.

ನೀರಿನ ದಾಹ ನೀಗಿಸುತ್ತಿದ್ದ ಕಟ್ಟೆಯನ್ನು ಮುಚ್ಚಿ ಈಗಾಗಲೇ ಕಾಮಗಾರಿ ಪ್ರಾರಂಭ ಮಾಡಿದ್ದಾರೆ, ರೈತರಿಗೆ ಹಾಗೂ ಜಾನುವಾರುಗಳು ಈ ಕಟ್ಟೆಯನ್ನೇ ಅವಲಂಬಿಸಿದ್ದು, ಕೆರೆಯ ಸಮೀಪ ಮುಖ್ಯ ರಸ್ತೆ ಹೊಂದಿಕೊಂಡಿರುವ ಕಾರಣ ನೀರಿನ ಮೂಲವೇ ಇಲ್ಲವೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಳಿಗೆ ನಿರ್ಮಾಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸಮೀಪದ ಸರ್ವೇ ನಂ.2ರಲ್ಲಿ ಸರ್ಕಾರಿ ಜಾಗದ ಕಟ್ಟೆಗೆ ಸುತ್ತಮುತ್ತಲ ಪ್ರದೇಶದ ನೀರು ತುಂಬಿ ಕೊಡಿ ಬಿದ್ದ ನೀರು ಹರಿಯುತಿತ್ತು. ಸರ್ವೇ ನಂ. 191ರ ಸರ್ಕಾರಿ ಕಟ್ಟೆಗೆ ಏತನೀರಾವರಿ ಮೂಲಕ ನೀರನ್ನು ತುಂಬಿಸಲಾಗುತ್ತಿದೆ, ಇಷ್ಟೆಲ್ಲ ಜಲಮೂಲ ಹೊಂದಿರುವ ಕಟ್ಟೆಯನ್ನು ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅಕ್ರಮವಾಗಿ ಮುಚ್ಚಿ, ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ, ಕೂಡಲೇ ಇಲ್ಲಿನ ಅಕ್ರಮಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸರ್ಕಾರಿ ಕಟ್ಟೆಯನ್ನು ಅಭಿವೃದ್ಧಿ ಪಡಿಸಬೇಕು. ಅಂತೆಯೇ ಇದಕ್ಕೆ ಸಂಬಂಧಿಸಿದ ದಾಖಲೆ, ಗ್ರಾಮನಕ್ಷೆ, ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.