ಜಿಲ್ಲೆ

ಎಲ್ಲ ಬಸ್‌ಸ್ಟಾಪ್‌ಗಳಲ್ಲಿ ಸರ್ಕಾರಿ ಬಸ್ ನಿಲ್ಲಿಸಿ

ಎನ್.ಆರ್.ಪುರ: ತಾಲೂಕಿನ ಗಡಿ ಭಾಗಗಳಾದ ಕೊರಲಕೊಪ್ಪದಿಂದ ಕುದ್ರೆಗುಂಡಿಯವರೆಗಿನ ಎಲ್ಲ ಬಸ್‌ಸ್ಟಾಪ್‌ಗಳಲ್ಲೂ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ಒತ್ತಾಯಿಸಿದರು.

ತಾಪಂನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ಸಭೆಯಲ್ಲಿ ಖಾಸಗಿ ಬಸ್‌ಗಳು ನಿಲ್ಲಿಸುವ ಬಸ್‌ಸ್ಟಾಪ್‌ಗಳಲ್ಲಿ ಸರ್ಕಾರಿ ಬಸ್‌ಗಳನ್ನು ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು. ಆದರೂ ಕೆಲವು ಬಸ್‌ಗಳು ನಿಲ್ಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದರು.

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋ ಸಂಚಾರಿ ನಿರೀಕ್ಷಕ ಉಮೇಶ್ ಮಾತನಾಡಿ, ನಿಮ್ಮ ಮನವಿಯಂತೆ ನಮ್ಮ ಇಲಾಖೆ ಮೇಲಾಧಿಕಾರಿಗಳು ಕೊರಲಕೊಪ್ಪದಿಂದ ಬಿ.ಎಚ್.ಕೈಮರದವರೆಗಿನ ಬಸ್‌ಸ್ಟಾಪ್‌ಗಳ ಬಗ್ಗೆ ಸರ್ವೇ ಮಾಡಿ ವರದಿ ನೀಡಲು ಸೂಚಿಸಿದ್ದರು. ಅದರಂತೆ ಇಂದು ಸರ್ವೇ ಮಾಡಿ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಚಿಕ್ಕಮಗಳೂರು ಡಿಪೋ ಅಧಿಕಾರಿಗಳು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಶಿವಮೊಗ್ಗ ಡಿಪೋ ಅಧಿಕಾರಿಗಳ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಹೆಚ್ಚು ಸಂಚರಿಸಿದರೆ ಕೆಎಸ್‌ಆರ್‌ಟಿಸಿಗೆ ಆದಾಯ ಬರುತ್ತದೆ. ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ಎಲ್ಲ ವರ್ಗದ ಜನರಿಗೂ ತಲುಪಿದಂತಾಗುತ್ತದೆ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಜಿ.ನಾಗರಾಜ್, ಇಂದಿರಾನಗರ ರಾಘು, ಬೇಸಿಲ್, ಸೈಯದ್ ಶಫೀರ್‌ಅಹಮ್ಮದ್, ನಿತ್ಯಾನಂದ, ಹೂವಮ್ಮ, ಕೆಎಸ್‌ಆರ್‌ಟಿಸಿ ಡಿಪೋ ಸಂಚಾರಿ ನಿರೀಕ್ಷಕ ಉಮೇಶ್, ಕಚೇರಿ ನಿರೀಕ್ಷಕ ಗದಿಗೇಶ್ ಇದ್ದರು.