ಯಳಂದೂರು: ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲೂಕಿನಲ್ಲಿ ಬರ ಆವರಿಸಿದ್ದು, ಕುಡಿಯಲು ನೀರು, ದನಕರುಗಳಿಗೆ ಮೇವು ಹಾಗೂ ಬೆಳೆಗಳಿಗೆ ನೀರು ಇಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಪಕ್ಷಭೇದ ಮರೆತು ಒಮ್ಮತದಿಂದ ನಿರ್ಧಾರ ಮಾಡಿ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಶೆಟ್ಟಿ ಆಗ್ರಹಿಸಿದರು.
ಪಟ್ಟಣದ ಎಸ್‌ಬಿಎಂ ವೃತ್ತದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ನೀರು ಒದಗಿಸುವ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಕೊರತೆಯಿದೆ. ಪರಿಣಾಮ ಬೆ
ಳೆಗಳು ಒಣಗುತ್ತಿದ್ದು, ಇದರ ನಡುವೆ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಉಳಿದಂತೆ ಚಾಮರಾಜನಗರ ಹಾಗೂ ಯಳಂದೂರು ತಾಲೂಕನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಸರ್ವೇ ಮಾಡದೆ ಕಾಟಾಚಾರಕ್ಕೆ ಮಾಡುವ ಮೂಲಕ ಅನ್ಯಾಯ ಮಾಡಿದ್ದಾರೆ. ಹಾಗಾಗಿ ಸಂಬಂಧಪಟ್ಟವರು ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸೌಲಭ್ಯ ಕಲ್ಪಿಸಿ: ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ವಾಸಿಸುವ ಸೋಲಿಗ ಸಮುದಾಯದ ಜನರಿಗೆ ಮೂಲಕ ಸೌಲಭ್ಯ ಕಲ್ಪಿಸಬೇಕಿದೆ. ಇವರನ್ನು ಕಾಡಿನಿಂದ ಹೊರಹಾಕುವ ಪ್ರಯತ್ನಗಳು ನಡೆಯುತ್ತಿದ್ದು, ಈ ಕೂಡಲೇ ಜಿಲ್ಲಾಡಳಿತ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ವೇದಿಕೆ ರಾಜ್ಯದ ಉಪಾಧ್ಯಕ್ಷರಾದ ಉಮೇಶ್ ಗೌಡ, ಮಂಜೇಶ್, ಶಿವರಾಜಗೌಡ, ರವಿ, ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಜೆ.ಶ್ರೀನಿವಾಸ್, ಭೀಮಪ್ಪ, ಬೆಟ್ಟದ ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ಕೆಸ್ತೂರು ನಾಗರಾಜು, ಗೌಡಹಳ್ಳಿ ರವಿ, ಸೋಮಣ್ಣ, ರಾಜಕುಮಾರ್, ವರದರಾಜ್, ಆಟೋ ಕುಮಾರ್, ಉಮಾಶಂಕರ್, ವೆಂಕಟೇಶ್, ಗಣಿಗನೂರು ಪ್ರಸಾದ್, ಬಸವೇಗೌಡ, ಲಿಂಗರಾಜುಮೂರ್ತಿ, ಕಿಟ್ಟಿ, ಸ್ವಾಮಿ ಇತರರಿದ್ದರು.
20 ವೈಎಲ್‌ಡಿ ಚಿತ್ರ 02
ಯಳಂದೂರು ಪಟ್ಟಣದ ಎಸ್‌ಬಿಎಂ ವೃತ್ತದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಶೆಟ್ಟಿ ಅವರನ್ನು ತಾಲೂಕು ಘಟಕ ವತಿಯಿಂದ ಅಭಿನಂದಿಸಲಾಯಿತು. ವೈ.ಕೆ.ಮೋಳೆ ನಾಗರಾಜು, ಶ್ರೀನಿವಾಸ್, ಭೀಮಪ್ಪ ಇದ್ದರು.