ಜಿಲ್ಲೆ

ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ

ಅವಿನಾಶ್ ಜೈನಹಳ್ಳಿ

ಮೈಸೂರು: ವಿರೋಧ ಪಕ್ಷದ ನಾಯಕ ಅಶೋಕ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಎಚ್ಚರಿಸಿದರು.

ಸಿದ್ದರಾಮಯ್ಯ ಅವರು ಪ್ರಬಲ ನಾಯಕರಾಗಿದ್ದಾರೆ. ಈ ರೀತಿ ಇಲ್ಲದೇ ಹೋಗಿದ್ದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ದೊರಕಿಸಿಕೊಡಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ, ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳನ್ನು ಜಾರಿ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ಯಾರಂಟಿಗಳನ್ನು ಬಿಜೆಪಿ ಮುಖಂಡರು ಟೀಕಿಸಿದ್ದರು. ಅವುಗಳ ಜಾರಿ ಸಾಧ್ಯವಿಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಅವರು ಅವನ್ನು ಜಾರಿಗೊಳಿಸಿದ್ದಾರೆ. ಗ್ಯಾರಂಟಿಗಳಿಂದಾಗಿ ರಾಜ್ಯ ದಿವಾಳಿಯಾಗುತ್ತದೆ ಎಂಬ ಟೀಕೆಗೆ ಪ್ರತಿಯಾಗಿ ಇಡೀ ದೇಶವೇ ಮೆಚ್ಚುವಂತಹ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸುಮಾರು 1.25 ಕೋಟಿ ಜನ ಗ್ಯಾರಂಟಿಗಳ ಲಾಭ ಪಡೆಯುತ್ತಿದ್ದಾರೆ. ಅವರ ಬಗ್ಗೆ ಮಾತನಾಡಲು ಏನೂ ಇಲ್ಲದ ಕಾರಣ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು.