ಮುಳವಾಡ ಬಳಿಯ ಅಕ್ರಮ ಟೋಲ್​ ವಸೂಲಿ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಅಹಿಂದ ಸಂಟನೆಗಳ ಪದಾಧಿಕಾರಿಗಳು ಕಾರ್ಯನಿರ್ವಾಹಕ ಇಂಜಿನಿಯರ್​ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಮನವಿ ಸಲ್ಲಿಸಿದರು. ಸೋಮನಾಥ ಕಳ್ಳಿಮನಿ, ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ ಮತ್ತಿತರರಿದ್ದರು. 
ಜಿಲ್ಲೆ

ಮುಳವಾಡ ಟೋಲ್​ ವಸೂಲಿ ನಿಲ್ಲಿಸಿ

ಗಿರೀಶ ಸಗರ

ವಿಜಯಪುರ : ಮುಳವಾಡ ಅಕ್ರಮ ಟೋಲ್​ ವಸೂಲಿ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಅಹಿಂದ ಸಂಟನೆಗಳ ಪದಾಧಿಕಾರಿಗಳು ಸೋಮವಾರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್​ ಅವರಿಗೆ ಮನವಿ ಸಲ್ಲಿಸಿದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 218ರ ಮುಳವಾಡ ಗ್ರಾಮದ ಬಳಿಯ ರಸ್ತೆ ದರೋಡೆ ನಡೆಯುತ್ತಿದ್ದು ಅದನ್ನು ತಕ್ಷಣ ನಿಲ್ಲಿಸಬೇಕು. ಹೊನಗನಹಳ್ಳಿ ರೈಲ್ವೆ ಗೇಟ್​ ಬಳಿ ಮೇಲುಸೇತುವೆ ಕಾಮಗಾರಿ ಇನ್ನೂ ನಡೆದಿದ್ದು ಅಲ್ಲಿಂದ ಎರಡು ಕಡೆ ಸುಮಾರು 2 ಕಿಮೀ. ರಸ್ತೆ ತುಂಬಾ ಹಾಳಾಗಿದೆ. ಅಲ್ಲದೆ, ರಸ್ತೆ ತುಂಬಾ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಅದರಿಂದ ಸವಾರರ ಸಾಕಷ್ಟು ಸಮಯ ಮತ್ತು ಇಂಧನ ಹಾಳಾಗುತ್ತಿದೆ. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ ಗಡ್ಕರಿ ಅವರೇ ಸ್ಪಷ್ಟಪಡಿಸಿದಂತೆ ರಸ್ತೆ ಸರಿ ಇಲ್ಲದಿದ್ದರೆ ಹೆದ್ದಾರಿ ಏಜನ್ಸಿಗಳು ಟೋಲ್​ ವಿಧಿಸಬಾರದು ಎಂದು ಸ್ಪಷ್ಟಪಡಿಸಿದರೂ ಕೂಡ ಮುಳವಾಡ ಟೋಲ್​ ಗುತ್ತಿಗೆದಾರರು ಜನರಿಂದ ಒತ್ತಾಯವಾಗಿ ಹಣ ವಸೂಲಿ ಮಾಡುತ್ತಿದ್ದು, ಇದು ಸಂಪೂರ್ಣ ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದ ಸಂಸದ ರಮೇಶ ಜಿಗಜಿಣಗಿಯವರು ಈ ಅಕ್ರಮವಾಗಿ ಮುಳವಾಡ ಟೂಲ್​ ಹಣ ವಸೂಲಿ ಮಾಡುವುದನ್ನು ನಿಲ್ಲಿಸಲಿ ಮತ್ತು ನಗರದ ವಜ್ರಹನುಮಾನ ಗೇಟ್​ ಹತ್ತಿರ ನಿರ್ಮಿಸಿದ ರೈಲ್ವೆ ಮೇಲುಸೇತುವೆ ಅತ್ಯಂತ ಅವೈಜ್ಞಾನಿಕವಾಗಿದ್ದು, ಒಬ್ಬಿಬ್ಬರ ಸ್ವ ಹಿತಕ್ಕಾಗಿ ಇದನ್ನು ದೆಹಲಿಯ ಜಂತರ್​& ಮಂತರ್​ ತರಹ ನಿರ್ಮಿಸಲಾಗಿದ್ದು, ಸವಾರರು ಯಾವ ಕಡೆಯಿಂದ ಹೋಗಬೇಕು. ಎಲ್ಲಿಂದ ಹೊರಬರಬೇಕು ತಿಳಿಯದಾಗಿದೆ ಎಂದು ದೂರಿದ ಅವರು, ಈ ನಿಟ್ಟಿನಲ್ಲಿ ಪರಿಹಾರ ಕೈಗೊಳ್ಳದೇ ಹೋದರೆ ಮುಂಬರುವ ದಿನದಲ್ಲಿ ಉಗ್ರಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿದರು.

ಮುಖಂಡರಾದ ಪ್ರಭುಗೌಡ ಪಾಟೀಲ, ಅನೀಲ ಹೊಸಮನಿ, ವಿ.ಎಸ್​. ಗಸ್ತಿ, ಸಂಜು ಕಂಬಾಗಿ, ಮಹಾದೇವಿ ಗೋಕಾಕ ಮತ್ತಿತರರಿದ್ದರು.