ಜಿಲ್ಲೆ

ಬಾಲ್ಯ ವಿವಾಹಕ್ಕೆ ಬಿದ್ದಿಲ್ಲ ತಡೆ

ಚಳ್ಳಕೆರೆ: ಬಾಲ್ಯ ವಿವಾಹ ನಿಷೇಧ ಮತ್ತು ಪೋಕ್ಸೋ ಕುರಿತು ಕಾನೂನಿನ ಅರಿವು ಇದ್ದರೂ ಪ್ರಕರಣಗಳು ಹೆಚ್ಚು ಆಗಿತ್ತಿರುವುದು ಆತಂಕದ ವಿಷಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಕಳವಳ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಕೀಲರ ಸಂಘ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಕ್ಸೊ, ಬಾಲ್ಯ ವಿವಾಹ ನಿಷೇಧ ತಡೆ ಕುರಿತಾದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ವಿವಾಹ ಮಾಡುವುದರಿಂದ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತವೆ. ಪ್ರತಿಯೊಬ್ಬ ತಂದೆ-ತಾಯಿ ಮಗುವಿನ ಪ್ರೌಢಿಮೆ ಬಯಸಬೇಕು. ಮಕ್ಕಳನ್ನು ದುಡಿಮೆಗೆ ಕಳುಹಿಸಬಾರದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಬಾಲ್ಯ ವಿವಾಹ ಪ್ರಕರಣಗಳಲ್ಲಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್‌ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ 157 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲೂ ಜಾಗೃತಿ ನಡೆಯಬೇಕಿದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಕಲಕಪ್ಪ ಗೋಣಿ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಎಸ್.ಕಾಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ, ತಾಪಂ ಇಒ ಜಿ.ಕೆ.ಹೊನ್ನಯ್ಯ, ಸಿಡಿಪಿಒ ಸಿ.ಹರಿಪ್ರಸಾದ್ ಇತರರಿದ್ದರು.