ಕುಮಟಾ: ವಿದ್ಯುತ್ ಗ್ರಾಹಕರೊಬ್ಬರು ಕರೆಂಟ್ ಸಮಸ್ಯೆ ಬಗ್ಗೆ ಹೆಸ್ಕಾಂ ಎಇಇಗೆ ದೂರವಾಣಿ ಕರೆ ಮಾಡಿದಾಗ ಸಮಸ್ಯೆ ಪರಿಹಾರದ ಬಗ್ಗೆ ತಿಳಿಸದೇ ಉಡಾಫೆ ಉತ್ತರ ನೀಡಿರುವ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಬುಧವಾರ ವೈರಲ್ ಆಗಿದೆ.
ಶೋಕನಮಕ್ಕಿಯ ಮಹಿಳೆಯೊಬ್ಬರು ಹೆಸ್ಕಾಂ ಎಇಇ ರಾಜೇಶ ಮಡಿವಾಳ ಅವರಿಗೆ ಕರೆ ಮಾಡಿ, ನಮ್ಮಲ್ಲಿ ವಿದ್ಯುತ್ ವ್ಯತ್ಯಯ ಅನಿಯಮಿತವಾಗಿದೆ. ಶೋಕನಮಕ್ಕಿಯ ಪಕ್ಕದ ಹೆರವಟ್ಟಾ ಭಾಗದಲ್ಲಿ ಕರೆಂಟ್ ಇದ್ದರೂ ನಮಗೆ ಕರೆಂಟ್ ಇರುವುದಿಲ್ಲ. ಹಗಲು-ರಾತ್ರಿಯೆನ್ನದೇ ವಿದ್ಯುತ್ ಸಮಸ್ಯೆ ಇದೆ ಎಂದು ದೂರಿದ್ದಾರೆ.
ಎಇಇ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದಲ್ಲಿ ರಾತ್ರಿ ಹೊತ್ತು ವಿದ್ಯುತ್ ಸರಿಪಡಿಸುವ ವ್ಯವಸ್ಥೆ ನಮ್ಮಲ್ಲಿಲ್ಲ, ಪಕ್ಕದ ಹೆರವಟ್ಟಾದವರು ಇನ್ವರ್ಟರ್ ಬಳಸಿರಬಹುದು. ನೀವೂ ಹಾಕಿಸಿಕೊಳ್ಳಿ ಅಥವಾ ಗಾಳಿ ಬೀಸುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದ್ದಾರೆ.
ಇಬ್ಬರ ಮಾತುಕತೆಯ ಆಡಿಯೋ ವೈರಲ್ ಆಗಿದ್ದು, ಎಇಇ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ. ಕೆಲವರು ಎಇಇ ಅಂಥವರಲ್ಲ, ಕಾಮಿಡಿ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿರುವುದೂ ಕಂಡುಬಂದಿದೆ. ಆದರೆ, ಕೆಲ ದಿನಗಳ ಹಿಂದೆ ತಾಪಂ ಕೆಡಿಪಿ ಸಭೆಯಲ್ಲಿ ಹೆಸ್ಕಾಂ ಎಇಇ ತಾಪಂ ಆಡಳಿತಾಧಿಕಾರಿಗೂ ಇದೇ ರೀತಿ ಉಡಾಫೆಯಿಂದ ಎದುರುತ್ತರಿಸಿ ಬಳಿಕ ಸಭೆಯ ಕ್ಷಮೆ ಕೇಳಿದ್ದರು.