ಜಿಲ್ಲೆ

ಜಿಲ್ಲೆಯ 43 ಕುಟುಂಬಗಳ ಭಾಗ್ಯಲಕ್ಷ್ಮೀ ಬಾಂಡ್ ಗೆ ತಡೆ ಏಕೆ ಗೊತ್ತಾ..?

ಕಾರವಾರ: ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಜಿಲ್ಲೆಯ 43 ಕುಟುಂಬಗಳ ಭಾಗ್ಯಲಕ್ಷ್ಮೀ ಖಾತೆಯನ್ನು ತಡೆ ಹಿಡಿಯಲಾಗಿದೆ.
ಬಿಪಿಎಲ್ ಅಥವಾ ಅಂತ್ಯೋದಯ ಕುಟುಂಬದಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ವಿಮೆ ಹಾಗೂ ಠೇವಣಿ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದೆ.

ವಿಶೇಷ ಸಂದರ್ಭ ಹೊರತುಪಡಿಸಿ(ಎರಡನೇ ಹೆರಿಗೆಯಲ್ಲಿ ಅವಳಿ ಹೆಣ್ಣು ಅಥವಾ ತ್ರಿವಳಿ ಮಗು ಜನಿಸಿದ್ದಲ್ಲಿ) ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯ ನೀಡಬೇಕು ಎಂದು ಯೋಜನೆಯ ನಿಯಮ ಹೇಳುತ್ತದೆ.
ಆದರೆ, ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ, 43 ಕುಟುಂಬಗಳನ್ನು ಗುರುತಿಸಿ ಅಂಥವರ ಪಾಸ್ ಪುಸ್ತಕಗಳನ್ನು ವಿತರಿಸದೇ ಕೇಂದ್ರ ಕಚೇರಿಗೆ ವಾಪಸ್ ಕಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸುಕನ್ಯಾ ಸಮೃದ್ಧಿ:
2006-007 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮೊದಲು ಪ್ರತಿ ಹೆಣ್ಣು ಮಗುವಿನ ಹೆಸರಿಗೆ 19,300 ರೂ.ಗಳನ್ನು ಎಲ್‌ಐಸಿಗೆ ರಾಜ್ಯ ಸರ್ಕಾರ ಪಾವತಿಸುತ್ತಿತ್ತು. ಆಕೆಗೆ 18 ವರ್ಷವಾದ ನಂತರ 1 ಲಕ್ಷದಷ್ಟು ಹಣವನ್ನು ಫಲಾನುಭವಿ ಪಡೆಯಬಹುದಿತ್ತು.

ಆದರೆ, 2021 ರಿಂದ ಈ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆಯ ಜತೆ ಜೋಡಿಸಲಾಗಿದೆ. ಹೆಣ್ಣು ಮಗು ಹುಟ್ಟಿದ ಮೊದಲ ವರ್ಷದಲ್ಲಿ ನೋಂದಣಿ ಮಾಡಬೇಕು. ಮಗುವಿಗೆ 15 ವರ್ಷವಾಗುವವರೆಗೆ ಪ್ರತಿ ವರ್ಷ ರಾಜ್ಯ ಸರ್ಕಾರ ತಲಾ 3 ಸಾವಿರ ರೂ.ನಂತೆ ಒಟ್ಟು 45 ಸಾವಿರ ರೂ.ಗಳನ್ನು ಅಂಚೆ ಇಲಾಖೆಯಲ್ಲಿರುವ ಮಗುವಿನ ಖಾತೆಗೆ ಪಾವತಿಸುತ್ತದೆ.

ಆಕೆಗೆ 21 ವರ್ಷವಾದಾಗ 1.27 ಲಕ್ಷ ರೂ.ಗಳನ್ನು ಆಕೆ ಹಿಂಪಡೆಯಬಹುದು.

ಪಾಲಕರಿಗೆ ಶಾಶ್ವತ ಅಂಗವೈಕಲ್ಯವಾದಲ್ಲಿ ಅಥವಾ ಮೃತಪಟ್ಟಲ್ಲಿ ಮಕ್ಕಳಿಗೆ ನಿಗದಿತ ವಿಮಾ ಸೌಲಭ್ಯವೂ ದೊರೆಯಲಿದೆ.
6 ಸಾವಿರ ವಿತರಣೆ ಬಾಕಿ
ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 72,434 ಹೆಣ್ಣು ಮಕ್ಕಳಿಗೆ ವಿಮೆಯ ಬಾಂಡ್ ಹಾಗೂ ಈಗ 8674 ಮಕ್ಕಳಿಗೆ ಅಂಚೆ ಪಾಸ್ ಪುಸ್ತಕ ವಿತರಿಸಲಾಗಿದೆ.

ಇನ್ನೂ 263 ಬಾಂಡ್‌ಗಳು ಹಾಗೂ 6329 ಪಾಸ್ ಪುಸ್ತಕಗಳನ್ನು ಸಂಬAಧಪಟ್ಟ ಫಲಾನುಭವಿಗಳಿಗೆ ವಿತರಿಸುವುದು ಬಾಕಿ ಇದೆ. ಅದರಲ್ಲಿ 43 ಪಾಸ್ ಪುಸ್ತಕಗಳನ್ನು ತಡೆ ಹಿಡಿಯಲಾಗಿದೆ.

ಸಂತಾನ ನಿಯಂತ್ರಣ
ಸರ್ಕಾರದ ನಿಯಮದಂತೆ ಪತಿ ಅಥವಾ ಪತ್ನಿ ಎರಡು ಮಕ್ಕಳ ನಂತರ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಎರಡು ಹೆರಿಗೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಮೂರನೇ ಮಗು ಜನಿಸಿದರೆ, ಮೊದಲು ಪಡೆದವರಿಗೂ ಸೌಲಭ್ಯ ಕಟ್‌ ಆಗಲಿದೆ.

ಆದರೆ, ಅದನ್ನೂ ಮೀರಿ ಮೂರನೇ ಮಕ್ಕಳನ್ನು ಪಡೆದವರ ಬಾಂಡ್ ಅಥವಾ ಪಾಸ್ ಪುಸ್ತಕ ನೀಡುವುದಿಲ್ಲ.‌ ಈಗ ನೀಡಿದರೂ ಮುಂದೆ ಕ್ಲೈಮ್ ವೇಳೆ ಅದನ್ನು ತಡೆಹಿಡಿಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಭಾಗ್ಯಲಕ್ಷ್ಮೀ ಸೌಲಭ್ಯ ಪಡೆದ ಫಲಾನುಭವಿಗಳ ದಾಖಲೆಗಳನ್ನು ಅಂಗನವಾಡಿಗಳಲ್ಲಿ ಇಡಬೇಕಾಗುತ್ತದೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಇದನ್ನು ನಿರ್ವಹಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.