ಜಿಲ್ಲೆ

ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ, ಪೊಲೀಸ್ ತನಿಖೆ ಚುರುಕು

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನಗರದಲ್ಲಿನ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಮನೆಯ ಮೇಲೆ ಕಲ್ಲು ತೂರಾಟಕ್ಕೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ ಸಹ ಜಿಲ್ಲಾ ಕೇಂದ್ರದಿಂದ ಎರಡು ಕಿ.ಮೀ ದೂರದಲ್ಲಿರುವ ಕಂದವಾರದಲ್ಲಿ ಶಾಸಕರು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದರ ನಡುವೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಕಲ್ಲು ಹೊಡೆದ ಹಿನ್ನೆಲೆಯಲ್ಲಿ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಇದೇ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ರಾತ್ರಿ 10 ರ ವೇಳೆ ಜೋರು ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಎಸ್.ಶಿವಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

* ಸಿಸಿ ಕ್ಯಾಮೆರಾ ದೃಶ್ಯ

ಮನೆಯ ಆವರಣದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಿದ್ದು ಇದರಲ್ಲಿ ಮುಸುಕುಧಾರಿಯೊಬ್ಬ ಹಾದು ಹೋಗಿರುವ ದೃಶ್ಯ ಕಂಡು ಬಂದಿದೆ. ಅನುಮಾನಾಸ್ಪದವಾಗಿ ಸಮೀಪದಲ್ಲಿ ಓಡಾಡಿರುವುದು ತಿಳಿದು ಬಂದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

* ಬೆಂಬಲಿಗರ ಮೇಲೆ ಅನುಮಾನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಘಟನೆ ನಡೆದಿದೆ. ಇದಕ್ಕೆ ಎನ್‌ಡಿಎ ವಿಜೇತ ಅಭ್ಯರ್ಥಿ ಡಾ ಕೆ.ಸುಧಾಕರ್ ಬೆಂಬಲಿಗರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.

*ಮನೆಯ ಮೇಲೆ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಮೂರು ಕಲ್ಲುಗಳನ್ನು ತೂರಿದ್ದಾರೆ. ಇದರಲ್ಲಿ ಒಂದು ಕಿಟಕಿಗೆ ಬಿದ್ದು ಗಾಜು ಪುಡಿಪುಡಿಯಾಗಿದೆ. ಹಿಂದೆ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ದುಷ್ಕೃತ್ಯವೆಸಗಲಾಗಿದೆ. ಇದಕ್ಕೆ ಎದುರಾಳಿ ಸುಧಾಕರ್ ಬೆಂಬಲಿಗರು ಕಲ್ಲು ಹೊಡೆದಿರಬಹುದೆಂಬ ಶಂಕೆ ಇದೆ.

ಚೇತನ್, ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಸಹೋದರ