ಕೇರಳದಲ್ಲಿ ಸಂಚರಿಸುತ್ತಿರುವ ರೈಲುಗಳ ಮೇಲೆ ಕಲ್ಲುತೂರಾಟ ಮುಂದುವರಿದಿದೆ 
ಜಿಲ್ಲೆ

ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲೆಸೆತ

Mangaluru - Shravan Kumar Nala

ಕಾಸರಗೋಡು: ಕೇರಳದಲ್ಲಿ ಸಂಚರಿಸುತ್ತಿರುವ ರೈಲುಗಳ ಮೇಲೆ ಕಲ್ಲುತೂರಾಟ ಮುಂದುವರಿದಿದೆ. ಕಾಸರಗೋಡಿನಿಂದ ಬುಧವಾರ ಮಧ್ಯಾಹ್ನ ತಿರುವನಂತಪುರಕ್ಕೆ ಹೊರಟಿದ್ದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ತಲಶ್ಯೇರಿ-ಮಾಹೆ ಮಧ್ಯೆ ಅಪರಾಹ್ನ 3.49ರ ವೇಳೆ ಕಲ್ಲೆಸೆತ ನಡೆದಿದ್ದು, ಇದರಿಂದ ರೈಲಿನ ಸಿ-8ನೇ ಬೋಗಿಯ ಕಿಟಿಕಿ ಗಾಜು ಪುಡಿಯಾಗಿದೆ. ರಾತ್ರಿ ವೇಳೆ ಕಲ್ಲು ತೂರುತ್ತಿದ್ದ ದುಷ್ಕರ್ಮಿಗಳು ಪ್ರಸ್ತುತ ಹಾಡಹಗಲೇ ಈ ಕೃತ್ಯದಲ್ಲಿ ತೊಡಗಿರುವುದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಆರ್‌ಪಿಎಫ್ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ. ಆ.14ರಂದು ತುರಂತ್ ಎಕ್ಸ್‌ಪ್ರೆಸ್ ರೈಲಿಗೆ ಪಾಪಿನಶ್ಯೇರಿ- ವಳಪಟ್ಟಣ ಮಧ್ಯೆ ಕಲ್ಲು ತೂರಾಟ ನಡೆದಿತ್ತು. ಇದರ ಹಿಂದಿನ ದಿನ ರಾತ್ರಿ ಮೂರು ರೈಲುಗಳ ಮೇಲೆ ಸರಣಿ ಕಲ್ಲೆಸೆತ ನಡೆದಿತ್ತು.

ಕಳೆದ ಕೆಲವು ವರ್ಷಗಳಿಂದ ಮಂಜೇಶ್ವರ- ಕೋಯಿಕ್ಕೋಡ್ ಮಧ್ಯೆ ರೈಲುಗಳ ಮೇಲೆ ವ್ಯಾಪಕ ಕಲ್ಲು ತೂರಾಟ ಪ್ರಕರಣಗಳು ನಡೆಯುತ್ತಿದ್ದರೂ, ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ರೈಲುಗಳ ಮೇಲೆ ನಿರಂತರ ಕಲ್ಲು ತೂರಾಟ ನಡೆಸುತ್ತಿರುವ ಕಿಡಿಗೇಡಿಗಳ ಪತ್ತೆಗೆ ರೈಲ್ವೆ ಪೊಲೀಸ್, ರೈಲ್ವೆ ಸುರಕ್ಷಾ ದಳದ ಜತೆಗೆ ಸ್ಥಳೀಯ ಪೊಲೀಸರನ್ನೂ ಸೇರಿಸಿಕೊಂಡು ಕಾರ್ಯಾಚರಣೆ ನಡೆಸುವಂತೆ ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.