ಜಿಲ್ಲೆ

22 ಲಕ್ಷ ರೂ ಮೌಲ್ಯದ ಮೊಬೈಲ್ ವಶ: ವಾರಸುದಾರರಿಗೆ ಹಸ್ತಾಂತರಿಸಿದ ಜಿಲ್ಲಾ ಎಸ್ಪಿ

ಮಂಡ್ಯ: ಕಳೆದ ಕೆಲ ದಿನದಿಂದ ಕಳ್ಳತನವಾಗಿದ್ದ ಸುಮಾರು 22 ಲಕ್ಷ ರೂ ಮೌಲ್ಯದ 125 ಮೊಬೈಲ್‌ಗಳನ್ನು ಗುರುವಾರ ನಗರದ ಪೊಲೀಸ್ ಭವನದಲ್ಲಿ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿದ ಎಸ್ಪಿ, ಜಿಲ್ಲೆಯಲ್ಲಿ ಸಾರ್ವಜನಿಕರು ಆಕಸ್ಮಿಕವಾಗಿ ಕಳೆದುಕೊಂಡಿದ್ದ ಅಥವಾ ಕಳ್ಳತನವಾಗಿದ್ದ ಸ್ಮಾರ್ಟ್ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ. ಎಎಸ್ಪಿ ಸಿ.ಇ.ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿಇಎನ್ ಅಪರಾಧ ಠಾಣೆಯ ಆರಕ್ಷಕ ನಿರೀಕ್ಷಕ ಮಂಜೇಗೌಡ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಘವೇಂದ್ರ ಕಠಾರಿ, ರಸೂಲಸಾಬ ಗೌಂಡಿ, ಸಿಬ್ಬಂದಿ ಗಿರೀಶ್, ಸುಮನ್ ತಂಡ ಕಳೆದ ಮೂರು ತಿಂಗಳಿನಿಂದ ಕಾರ್ಯಾಚರಣೆ ನಡೆಸಿ ಮೊಬೈಲ್‌ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಹಿಂದೆ 130 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಇದೀಗ 125 ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸುಮಾರು 45 ಲಕ್ಷ ರೂ ಮೌಲ್ಯದ ಸ್ಮಾರ್ಟ್‌ಪೋನ್ ನಾಪತ್ತೆ ಪ್ರಕರಣವನ್ನು ಬೇದಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರ ಮೊಬೈಲ್‌ಗಳು ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ತನಿಖೆ ನಡೆಸಿದಾಗ ಬೇರೆ ಜಿಲ್ಲೆ ಹಾಗೂ ಕೇರಳ, ಮಹಾರಾಷ್ಟ್ರದಲ್ಲಿ ಸಿಕ್ಕಿದೆ. ಹಲವರು ಗೊತ್ತಿಲ್ಲದೆ ಖರೀದಿ ಮಾಡಿ ಸಿಮ್ ಹಾಕಿದ ಬಳಿಕ ನಮಗೆ ಮಾಹಿತಿ ಸಿಕ್ಕಿದ್ದು, ಅವರಿಗೆ ಸೂಚನೆ ನೀಡಿ ವಾಪಸ್ ತರಿಸಲಾಗಿದೆ. ಈ ಪೈಕಿ ಕೆಲವರು ಕೊರಿಯರ್ ಮೂಲಕವೂ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂದು ವಿವರಿಸಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಇನ್ಸ್‌ಪೆಕ್ಟರ್ ಮಂಜೇಗೌಡ, ಪಿಎಸ್‌ಐಗಳಾದ ರಾಘವೇಂದ್ರ ಕಠಾರಿ, ರಸೂಲಸಾಬ ಗೌಂಡಿ ಇದ್ದರು.