ವಿಜಯವಾಣಿ ಸುದ್ದಿಜಾಲ ತೂಬಗೆರೆ
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ನಾಗರಕಟ್ಟೆಯಲ್ಲಿ ಪೂಜೆ ಸಲ್ಲಿಸುವಲ್ಲಿ ಮಗ್ನರಾಗಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಕದ್ದ ಚಾಲಕಿ ಕಳ್ಳರು ಬ್ಯಾಗ್‌ನ್ನು ಅಲ್ಲಿಯೇ ಬಿಟ್ಟು ಕ್ಷಣಾರ್ಧದಲ್ಲಿ ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ನಾಲ್ಕೈದು ತಾಸಿನ ಬಳಿಕ ಮಹಿಳೆಗೆ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅ.21 ರಂದು ಪ್ರಕರಣ ನಡೆದಿದ್ದು, ಶ್ರೀನಿವಾಸಪುರ ಮೂಲದ ನಿರ್ಮಲಾ ಎಂಬುವರು ಒಂದೂವರೆ ಲಕ್ಷ ರೂ.ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದಾರೆ.
ಬ್ಯಾಗ್ ಇಟ್ಟು ಪೂಜೆ: ಘಾಟಿ ದೇಗುಲದಲ್ಲಿ ದೇವರ ದರ್ಶನ ಪಡೆದ ನಿರ್ಮಲಾ, ಅಲ್ಲಿಂದ ನಾಗರಕಟ್ಟೆಗೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಚಿನ್ನದ ಸರ ಇಟ್ಟಿದ್ದ ಬ್ಯಾಗನ್ನು ಸಮೀಪದಲ್ಲಿಯೇ ಇಟ್ಟು ಪೂಜೆಯಲ್ಲಿ ಮಗ್ನರಾಗಿದ್ದಾರೆ. ಕೆಲವು ನಿಮಿಷದ ಬಳಿಕ ಬ್ಯಾಗ್ ತೆಗೆದುಕೊಂಡು ಮತ್ತೆ ದೇವರ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿಂದ ಮನೆಗೆ ಮರಳಲು ಬಸ್ ಹತ್ತಿ ಕುಳಿತಿದ್ದಾರೆ. ಬಸ್ ಮುಂದೆ ಸಾಗುತ್ತಿದ್ದಂತೆ ಬ್ಯಾಗ್ ತೆರೆದು ನೋಡಿದಾಗ ಸರ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಪರ್ಸ್‌ನಲ್ಲಿದ್ದ ಚಿನ್ನದ ಸರ: ನಿರ್ಮಲಾ ಬ್ಯಾಗ್‌ನಲ್ಲಿ ಸಣ್ಣದೊಂದು ಪರ್ಸ್‌ನಲ್ಲಿ ಚಿನ್ನದ ಸರ ಇಟ್ಟಿದ್ದರು ಎನ್ನಲಾಗಿದೆ. ಕಳ್ಳರು ಬ್ಯಾಗ್ ತೆಗೆದು ಪರ್ಸ್‌ನಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಬ್ಯಾಗ್ ಹಾಗೂ ಪರ್ಸ್ ಇದ್ದ ಸ್ಥಿತಿಯಲ್ಲೇ ಇಟ್ಟಿದ್ದಾರೆ ಇದರಿಂದ ತಕ್ಷಣಕ್ಕೆ ಅವರಿಗೆ ಸರ ಕಳುವಾಗಿರುವುದು ಗೊತ್ತಾಗಿಲ್ಲ ಎನ್ನಲಾಗಿದೆ.