ಮೈಸೂರು: ನಗರದಲ್ಲಿ ಹೆಸರು ವಾಸಿಯಾಗಿದ್ದ ಮತ್ತೊಂದು ಚಿತ್ರಮಂದಿರ ಇತಿಹಾಸ ಪುಟ ಸೇರಿದೆ. ವಿದ್ಯಾರಣ್ಯಪುರಂನಲ್ಲಿದ್ದ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಅವಳಿ ಚಿತ್ರ ಮಂದಿರ ನೆಲಸಮಗೊಂಡಿವೆ.
ಹಾಲಿವುಡ್, ಬಾಲಿವುಡ್ ಚಿತ್ರಗಳ ಮೂಲಕವೇ ಯುವ ಜನಾಂಗವನ್ನು ಸೆಳೆದಿದ್ದ ಅವಳಿ ಚಿತ್ರಮಂದಿರಗಳು ಮನೆ ಮಾತಾಗಿದ್ದವು.
ಟೈಟಾನಿಕ್, ಜುರಾಸಿಕ್ ಪಾರ್ಕ್ ಸೇರಿದಂತೆ ಜಾಕಿಚಾನ್ ನಟನೆಯ ಬಹುತೇಕ ಜನಪ್ರಿಯ ಇಂಗ್ಲಿಷ್ ಚಿತ್ರಗಳು ಇಲ್ಲಿ ಪ್ರದರ್ಶನಕಂಡಿದ್ದವು. ಇದರಿಂದ ಪ್ರತ್ಯೇಕ ಪ್ರೇಕ್ಷಕರ ವರ್ಗವನ್ನೇ ಅವಳಿ ಚಿತ್ರಮಂದಿರ ಹೊಂದಿದ್ದವು. ಆದರೆ ಕೋವಿಡ್ ಬಳಿಕ ಪ್ರೇಕ್ಷಕರು ಬಾರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದ ಅವಳಿ ಚಿತ್ರಮಂದಿರ ಕೆಲ ತಿಂಗಳಿಂದ ಬಂದ್ ಅಗಿದ್ದವು. ಈಗ ನೆಲಸಮಗೊಂಡಿವೆ. ಮಲ್ಟಿಫಕ್ಸ್ ಕಾಲದಲ್ಲಿ ಏಕ (ಸಿಂಗಲ್) ಸ್ಕ್ರೀನ್ ಚಿತ್ರಮಂದಿರಗಳಿಗೆ ಉಳಿಗಾಲವಿಲ್ಲ ಎನ್ನುವುದು ಮತ್ತೊಮ್ಮೆ ನೆನಪಿಸುವಂತಾಗಿದೆ.
ಈಗಾಗಲೇ ನಗರದಲ್ಲಿ ಹೆಸರಾಗಿದ್ದ ರಣಜಿತ್, ಅಪೇರಾ, ಶಾಂತಲಾ, ತಿಬ್ಬಾದೇವಿ, ಗಣೇಶ, ರತ್ನ, ಒಲಂಪಿಯಾ, ಇತ್ತೀಚೆಗೆ ಲಕ್ಷ್ಮಿ, ಸರಸ್ವತಿ ಚಿತ್ರಮಂದಿರಗಳು ನೆಲಸಮಗೊಂಡಿದ್ದವು. ಅವುಗಳ ಸಾಲಿಗೆ ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಸೇರಿವೆ. ಒಂದು ಕಾಲದಲ್ಲಿ ಬೆಂಗಳೂರು ಬಿಟ್ಟರೆ ಮೈಸೂರು ಚಿತ್ರಮಂದಿರದ ತವರಾಗಿ ಹೊಸ, ಹೊಸ ಚಿತ್ರಮಂದಿರಗಳು ನಿರ್ಮಾಣಗೊಳ್ಳುತ್ತಿದ್ದವು. ಆದರೆ ಈಗ ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳು ಮಾತ್ರ ಇದ್ದು ಅವುಗಳನ್ನಾದರೂ ಉಳಿಸಿಕೊಳ್ಳಬೇಕು ಎಂಬುದು ಸಿನಿಮಾ ಪ್ರೇಕ್ಷಕರ ಆಶಯವಾಗಿದೆ.
ಈ ಹಿಂದೆ ಮೈಸೂರಿನಲ್ಲಿ ಚಿತ್ರಗಳು ನಿರ್ಮಾಣಗೊಳ್ಳುತ್ತಿದ್ದು, ಚಿತ್ರಮಂದಿರಗಳಿಗೂ ಬೇಡಿಕೆ ಹೆಚ್ಚಿತ್ತು. ಸರ್ಕಾರ ಈಗ ಇಮ್ಮಾವಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ನಗರದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದೇ ಕಾಣೆಯಾಗುತ್ತಿರುವು ಚಿತ್ರಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.