ಜಿಲ್ಲೆ

ಕಂಪ್ಯೂಟರ್ ಲ್ಯಾಬ್ ಆರಂಭಿಸಲು ಕ್ರಮ

ಬಸವರಾಜ ವೀರಪ್ಪ ಗರಗ

ಹಾನಗಲ್ಲ: ತಾಲೂಕಿನ ಬೆಳಗಾಲಪೇಟೆ ಮತ್ತು ಹಿರೇಹುಲ್ಲಾಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ ಹಾಗೂ ಮಕರವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ತಾಲೂಕಿನ ಸೋಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 24 ಲಕ್ಷ ರೂ. ಜಿಪಂ ಅನುದಾನದಲ್ಲಿ ನಿರ್ವಿುಸಿದ ಎರಡು ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನಕ್ಕೆ ಕಾಯದೇ ಇದುವರೆಗೂ ತಾಲೂಕಿನಲ್ಲಿ 90 ಶಾಲೆಗಳಿಗೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಹಣದಲ್ಲಿ ಅರ್ಧ ಗ್ರಾಮಸ್ಥರು ನೀಡಿದರೆ, ಉಳಿದರ್ಧ ವೈಯಕ್ತಿಕವಾಗಿ ಭರಿಸಿದ್ದೇನೆ ಎಂದು ಶಾಸಕರು ಹೇಳಿದರು.

ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಸಮುದಾಯದ ಸಹಭಾಗಿತ್ವವಿದ್ದರೆ ಶೈಕ್ಷಣಿಕ ಕ್ಷೇತ್ರ ಸುಧಾರಣೆ ಕಾಣಲಿದೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಲು ಹಳೆಯ ವಿದ್ಯಾರ್ಥಿಗಳೂ ಮುಂದೆ ಬರಬೇಕು. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಅಜ್ಜಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾಯಕ್ಕನವರ, ಉಪಾಧ್ಯಕ್ಷೆ ನಾಗವ್ವ ಕತ್ತಿ, ಸದಸ್ಯ ದಾವಲಸಾಬ್ ನಾಗನೂರ, ನಿವೃತ್ತ ಪ್ರಾಚಾರ್ಯ ಸಿ.ಎಸ್. ಬಡಿಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.