ಜಿಲ್ಲೆ

ರೈತಸಂತೆ ಪ್ರಾಂಗಣ ಸದ್ಬಳಕೆಗೆ ಕ್ರಮ

ಹುಣಸೂರು: ನಗರದ ಸಂತೆಮೈದಾನದಲ್ಲಿ ಎಪಿಎಂಸಿ ಸ್ಥಾಪಿಸಿರುವ ರೈತಸಂತೆ ಪ್ರಾಂಗಣವನ್ನು ನಗರಸಭೆಗೆ ಹಸ್ತಾಂತರ ಮಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಹೇಳಿದರು.

ಗುರುವಾರ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ವಾರ್ಡ್ ಭೇಟಿ ಕಾರ್ಯಕ್ರಮದಡಿ 16 ಮತ್ತು 17ನೇ ವಾರ್ಡ್‌ಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡರ ನಿರ್ದೇಶನದಂತೆ ಪ್ರತಿವಾರ 2 ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರಿಹಾರೋಪಾಯ ಒದಗಿಸಲಾಗುತ್ತಿದೆ. 16ನೇ ವಾರ್ಡ್ ವ್ಯಾಪ್ತಿಯ ಸಂತೆಮೈದಾನದಲ್ಲಿ ದಶಕಗಳ ಹಿಂದೆ ಎಪಿಎಂಸಿ ವತಿಯಿಂದ 100*100 ಅಡಿ ಅಳತೆಯ ರೈತಸಂತೆ ಪ್ರಾಂಗಣ ನಿರ್ಮಿಸಲಾಗಿದೆ. ಆದರೆ ಈವರೆಗೆ ಪ್ರಾಂಗಣದ ಬಳಕೆಯಾಗಿಲ್ಲ. ಬದಲಾಗಿ ಅಕ್ರಮ ಚಟುವಟಿಕಗಳ ತಾಣವಾಗುತ್ತಿದೆ. ಹುಣಸೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರ ನಡೆಸುವ ಹಣ್ಣುಗಳು, ಹೂವುಗಳ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ರೈತ ಪ್ರಾಂಗಣವನ್ನು ವ್ಯವಸ್ಥೆಗೊಳಿಸಿ ನೀಡಲು ಉದ್ದೇಶಿಸಿದ್ದು, ಈ ಕುರಿತು ಎಪಿಎಂಸಿ ಕಾರ್ಯದರ್ಶಿ ಬಳಿ ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ, ಪೌರಾಯುಕ್ತೆ ಕೆ.ಮಾನಸ ಮತ್ತವರ ತಂಡ ಮಾತನಾಡಿ ಹಸ್ತಾಂತರ ಪ್ರಕ್ರಿಯೆಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಸಂತೆ ಮೈದಾನದಲ್ಲಿರುವ ಮಟನ್ ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಕೌನ್ಸಿಲ್ ಸಭೆಯಲ್ಲಿ ಸೂಕ್ತ ಕ್ರಮ ವಹಿಸಲು ತೀರ್ಮಾನಿಸಲಾಗುವುದು ಎಂದರು.

ಜತೆಗೆ 17ನೇ ವಾರ್ಡ್‌ನ ಎರಡು ಬೀದಿಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವಿತರಣೆ ಅಗುತ್ತಿಲ್ಲ. ನಾಗರಿಕರು ಚರಂಡಿ ಬದಿಯಲ್ಲಿರುವ ನಲ್ಲಿಯಲಿ ನೀರು ಹಿಡಿದುಕೊಳ್ಳುವ ದೃಶ್ಯವನ್ನು ನೋಡಿದ್ದೇನೆ. ಸಮರ್ಪಕ ನೀರು ಪೂರೈಕೆ ಮತ್ತು ಅಮೃತ್ ಯೋಜನೆಯ ಸಮರ್ಪಕ ಜಾರಿಗೆ ಕ್ರಮ ವಹಿಸಲಾಗುವುದು ಎಂದರು. ಈ ವೇಳೆ ನಗರಸಭೆ ಸದಸ್ಯ ಮನು, ಎಇಇ ಶರ್ಮಿಳಾ, ಪರಿಸರ ಇಂಜಿನಿಯರ್ ಸೌಮ್ಯಾ, ಆರ್‌ಒ ಸಿದ್ದಪ್ಪ, ಶಿವಕುಮಾರ್, ನಟರಾಜ್ ಇತರರಿದ್ದರು.

22 ಹುಣಸೂರು 12: ಹುಣಸೂರು ನಗರಸಭೆಯ 16 ಮತ್ತು 17ನೇ ವಾರ್ಡ್‌ನ ವಿವಿಧೆಡೆ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಸದಸ್ಯರಾದ ಕೃಷ್ಣ ರಾಜ ಗುಪ್ತ, ಮನು, ಪೌರಾಯುಕ್ತೆ ಕೆ.ಮಾನಸ, ಎಇಇ ಶರ್ಮಿಳಾ ಇತರರು ಇದ್ದರು.