ಜಿಲ್ಲೆ

ಸಂಸ್ಕರಿಸಿದ ನೀರಿನ ಮಾರುಕಟ್ಟೆ ಹೆಚ್ಚಿಸಲು ಕ್ರಮ: ಬೆಂಗಳೂರು ಜಲಮಂಡಳಿ ಅಧ್ಯಕ್ಷರ ಹೇಳಿಕೆ

ಬೆಂಗಳೂರು: ಸಂಸ್ಕರಿಸಿದ ನೀರಿನ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರವೇ ಸಣ್ಣ ಕೈಗಾರಿಕೆ ಪ್ರತಿನಿಧಿಸುವ ಕಾಸಿಯಾ, ಎಫ್‌ಕೆಸಿಸಿಐ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಗುರುವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ 20 ಲಕ್ಷದಿಂದ 40 ಲಕ್ಷ ಲೀ. ನೀರು ಬಳಕೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಮಾರ್ಚ್ ತಿಂಗಳಲ್ಲಿ ಇದ್ದಂತಹ ಅಭಾವ ಈಗ ಇಲ್ಲ. ನೀರಿನ ಸಮರ್ಪಕ ಬಳಕೆ ಹಾಗೂ ಉಳಿತಾಯಕ್ಕೆ ಒತ್ತು ನೀಡಿರುವುದರಿಂದ ನೀರಿನ ಸದ್ಬಳಕೆ ಅಗುತ್ತಿದೆ. ಜನಸಾಂದ್ರಿತ ಪ್ರದೇಶಗಳಲ್ಲಿ 1,200ಕ್ಕೂ ಹೆಚ್ಚು ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿದ್ದು, ಪ್ರತಿ ದಿನ ಸುಮಾರು 50 ಲಕ್ಷ ಲೀ. ನಿಂದ 1 ಕೋಟಿ ಲೀ. ವರೆಗೆ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಕೆ ಮಾಡುವ ಸುಮಾರು 18 ಸಾವಿರ ಗ್ರಾಹಕರಿದ್ದು, ಇವರು ಪ್ರತಿದಿನ ಸುಮಾರು 200 ಎಂಎಲ್‌ಡಿ ನೀರನ್ನ ಬಳಸುತ್ತಿದ್ದಾರೆ. ಇಂತಹವರು ಪಂಚಸೂತ್ರ ಅಳವಡಿಸಿಕೊಳ್ಳುವುದರಿಂದ ನೀರಿನ ಉಳಿತಾಯ ಮಾಡಬಹುದು ಎಂದರು.

ನಗರದಲ್ಲಿ ಸಂಸ್ಕರಿಸಿದ ನೀರು ವಿಪುಲವಾಗಿ ಲಭ್ಯವಿದೆ. ಇದರ ಸದ್ಬಳಕೆಯಿಂದ ನಾವು ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ. ಅಪಾರ್ಟ್‌ಮೆಂಟ್‌ಗಳು ಹಾಗೂ ಖಾಸಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದಲೂ ನೀರು ಲಭ್ಯವಿದೆ. ಇದರ ಬಳಕೆಯನ್ನು ಹೆಚ್ಚಿಸಲು ಜಲಮಂಡಳಿ ಕಾರ್ಯಪ್ರವೃತ್ತವಾಗಿದೆ. ಜತೆಗೆ ಸಂಸ್ಕರಿಸಿದ ನೀರಿನ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲೂ ಹಲವಾರು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಣ್ಣ ಕೈಗಾರಿಕಾ ಘಟಕಗಳು ಸಂಸ್ಕರಿತ ನೀರನ್ನ ಬಳಸುವಂತೆ ಮನವೊಲಿಸಲಾಗುವುದು ಎಂದು ತಿಳಿಸಿದರು.

ಕಾವೇರಿ ನೀರಿಗೆ ಕಡಿಮೆ ದರ:

ಒಂದು ಲೀಟರ್ ಬಾಟಲ್ ನೀರು ತಗೆದುಕೊಳ್ಳಲು ಖರ್ಚು ಮಾಡುವ ದುಡ್ಡಿನಲ್ಲಿ ಜಲಮಂಡಳಿ ಸಾವಿರ ಲೀಟರ್ ನೀರನ್ನ ಮನೆಗಳಿಗೆ ಸರಬರಾಜು ಮಾಡುತ್ತಿದೆ. ಕಡಿಮೆ ದರದಲ್ಲಿ ದೊರೆಯುವ ವಸ್ತುಗಳ ಮೇಲೆ ಯಾವಾಗಲೂ ಜನರಿಗೆ ಹೆಚ್ಚಿನ ಪ್ರೀತಿ ಇರುವುದಿಲ್ಲ. ಇದು ಕಾವೇರಿ ನೀರಿನ ವಿಷಯದಲ್ಲೂ ಸ್ಪಷ್ಟವಾಗಿ ಗೋಚರವಾಗುತ್ತದೆ. 1 ಲೀಟರ್ ನೀರನ್ನು ಜೋಪಾನ ಮಾಡುವ ಜನರು ಕೆಲವೆಡೆಗಳಲ್ಲಿ ಅಮೂಲ್ಯ ಕಾವೇರಿ ನೀರನ್ನ ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನ ತಡೆಗಟ್ಟುವಲ್ಲಿ ಬಳಕೆದಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.

ಏ.14ರಿಂದ ಶೇ.10 ನೀರಿನ ಕಡಿತ:

ಜಲಮಂಡಳಿಯಿಂದ ಪ್ರತಿ ತಿಂಗಳು 20 ಲಕ್ಷ ಲೀ.ನಿಂದ 40 ಲಕ್ಷ ಲೀ. ಬಳಕೆ ಮಾಡುವ ಬಲ್ಕ್ ಬಳಕೆದಾರರಿಗೆ ಏ.14ರಿಂದ ಶೇ.10 ನೀರನ್ನ ಕಡಿತಗೊಳಿಸಲಾಗುವುದು. ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಶೇ.10 ನೀರಿನ ಉಳಿತಾಯ ಆಗಲಿದೆ. ಕಡಿತಗೊಳಿಸಿದ ನೀರನ್ನ ಅಗತ್ಯವಿರುವಂತಹ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ.