ಜಿಲ್ಲೆ

ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆಯಾಗದಂತೆ ಕ್ರಮ

ಮದ್ದೂರು: ಪ್ರಸ್ತತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿಗೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ನ್ಯೂ ಮಹೇಶ್ ಲಂಚ್ ಹೋಮ್‌ನಲ್ಲಿ ಮಾಲೀಕ ಡಾಬಾ ಮಹೇಶ್ ಅವರಿಂದ ಭಾನುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ದೇವರ ದಯೆಯಿಂದ ಈ ಬಾರಿ ಉತ್ತಮ ಮಳೆಯಾಗಿದ್ದು ರೈತರಿಗೆ ಹರ್ಷ ತಂದಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಿ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು.

ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಮಳೆಯಾಗುವುದರಲ್ಲಿ ಏರುಪೇರು ಉಂಟಾಗುತ್ತಿತ್ತು. ಕೆಲವು ವರ್ಷ ಜಾಸ್ತಿ, ಕೆಲವು ವರ್ಷ ಕಡಿಮೆ ಮಳೆಯಾಗುತ್ತಿತ್ತು. ಆದರೆ ನಾನು ಅಧಿಕಾರಕ್ಕೆ ಬಂದ ನಂತರ ಸಮತೋಲನವಾಗಿ ಮಳೆಯಾಗಿರುವುದು ರೈತಾಪಿ ವರ್ಗದವರಿಗೆ ಹಾಗೂ ಸರ್ಕಾರಕ್ಕೂ ಹರ್ಷ ತಂದಿದೆ. ಮುಂದೆಯು ಇದೇ ರೀತಿ ಸಮೃದ್ಧವಾಗಿ ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆ ಆಗಲಿ ಜನರಿಗೆ ಹಾಗೂ ರೈತಾಪಿ ವರ್ಗಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ದೂರು ಕೊಟ್ಟರೆ ಕಾನೂನು ಕ್ರಮ: ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ಸಂಬಂಧ ದೂರು ನೀಡಿದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹನಿಟ್ರ್ಯಾಪ್ ಮಾಡಿಸಿದವರು ಯಾರೇ ಆಗಿದ್ದರು ಅವರ ವಿರುದ್ಧ ಕಾನೂನು ಕ್ರಮ ಆಗಲಿದೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಹನಿ ಟ್ರ್ಯಾಪ್ ಮಾಡಿಸಿದವರು ಯಾರು ಅದರಲ್ಲಿ ಯಾರ‌್ಯಾರು ಇದ್ದಾರೆ ಎಂಬುವುದು ತನಿಖೆ ನಂತರ ತಿಳಿಯಲಿದೆ ಈಗಲೇ ಆ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಮೊದಲು ದೂರು ನೀಡಲಿ ಎಂದರು.

ಹನಿಟ್ರ್ಯಾಪ್ ಪ್ರಕರಣವನ್ನು ಬಿಜೆಪಿಯವರು ಸಿಬಿಐ ಅವರಿಗೆ ವಹಿಸಿ ಎಂದು ಒತ್ತಾಯ ಮಾಡುತ್ತಿದ್ದಾರಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಿಜೆಪಿ ಅವರು ಪ್ರತಿಯೊಂದಕ್ಕೂ ಸಿಬಿಐಗೆ ವಹಿಸಿ ಎಂದು ಹೇಳುತ್ತಾರೆ. ಅವರು ಎಷ್ಟು ಪ್ರಕರಣಗಳನ್ನು ಇತ್ಯಾರ್ಥ ಮಾಡಿದ್ದಾರೆ ಹೇಳಿ, ಅವರ ಬಳಿಯೇ ತನಿಖೆ ಪೂರ್ಣಗೊಳ್ಳದ ಸಾಕಷ್ಟು ಪ್ರಕರಣ ಬಾಕಿ ಇವೆ ಎಂದರು.

ದೂರು ನೀಡಿದರೆ ರಾಜ್ಯದ ಸ್ಥಳಿಯ ತನಿಖಾ ಸಂಸ್ಥೆಗೆ ವಹಿಸಿ ಹನಿಟ್ಯ್ರಾಪ್ ಮಾಡಿಸಿದವರಿಗೆ ಕಾನೂನು ಕ್ರಮವಾಗಲಿದೆ ಎಂದರು.

ಅಮಾನತು ಮಾಡಿರುವುದು ಸರಿ: ಅಧಿವೇಶನದಲ್ಲಿ ಸ್ಪೀಕರ್ ಪೀಠದ ಮೇಲಕ್ಕೆ ಹತ್ತಿ, ಪೇಪರ್‌ಗಳನ್ನು ಸ್ಪೀಕರ್ ಮುಖಕ್ಕೆ ಎಸೆಯುವ ಜತೆಗೆ ಅವರನ್ನು ಮುಟ್ಟಲು ಹೋಗಿರುವ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿರುವ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಪ್ರತಿಭಟನೆ ಮಾಡಲು ಶಾಸಕರಿಗೆ ಹಕ್ಕಿದೆ ಮಾಡಲಿ, ಅದನ್ನು ಬಿಟ್ಟು ಅಧಿವೇಶನದಲ್ಲಿ ಎಲ್ಲೆ ಮೀರಿ ವರ್ತಿಸುವುದನ್ನು ಯಾರು ಸಹಿಸಲ್ಲ. ಆದ್ದರಿಂದ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ನ್ಯೂ ಮಹೇಶ್ ಲಂಚ್ ಹೋಮ್ ಮಾಲೀಕ ಡಾಬಾ ಮಹೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್‌ಕುಮಾರ್, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮುಖಂಡರಾದ ಹೊಂಬಯ್ಯ, ಶಂಕರೇಗೌಡ, ಅಜ್ಜಹಳ್ಳಿ ರಾಮಕೃಷ್ಣ, ಎಂ.ಡಿ.ಮಹಾಲಿಂಗಯ್ಯ, ಅರುಣ್‌ಕುಮಾರ್ ಸೇರಿದಂತೆ ಇತರರು ಇದ್ದರು.