ಶಿವಮೊಗ್ಗ: ಶಿವಮೊಗ್ಗದಲ್ಲಿ ಹೊಸದೊಂದು ಜಿಲ್ಲಾಸ್ಪತ್ರೆ ಮಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ಹಾಲಿ ಇರುವ ಮೆಗ್ಗಾನ್ ಆಸ್ಪತ್ರೆ ಉಳಿಸುವ ಜತೆಗೆ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಲಭಿಸುವಂತೆ ನೋಡಿಕೊಳ್ಳಬೇಕು. ಜು.23 ಅಥವಾ 24ರಂದು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಮೆಗ್ಗಾನ್ ಆಸ್ಪತ್ರೆಯ ವಿವಿಧ ವಾರ್ಡ್‌ಗಳನ್ನು ಪರಿಶೀಲಿಸಿದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಪ್ರತಿನಿತ್ಯ 2,500 ಮಂದಿ ಹೊರರೋಗಿ ವಿಭಾಗಕ್ಕೆ ಬಂದು ಹೋಗುತ್ತಿದ್ದಾರೆ. ನೂರಾರು ಮಂದಿ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಇಂತಹ ಆಸ್ಪತ್ರೆಯಲ್ಲಿ ನಾನಾ ಸಮಸ್ಯೆ ಇದ್ದು, ಸರಿಪಡಿಸುವ ನಿಟ್ಟಿನಲ್ಲಿ ಸಚಿವರು ಮತ್ತು ಆಯುಕ್ತರೊಂದಿಗೆ ಸಭೆ ನಿಗದಿಪಡಿಸಲಾಗಿದೆ. ಜಿಲ್ಲೆ ಅಧಿಕಾರಿಗಳು, ವೈದ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುವರು. ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊರರೋಗಿ ವಿಭಾಗ(ಚೀಟಿ ವಿತರಣೆ)ವನ್ನೇ ಸ್ಥಳಾಂತರ ಮಾಡಬೇಕಿದೆ. ಟ್ರಾಮಾಕೇರ್, ವೆಂಟಿಲೇಟರ್‌ಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದರಿಂದ ಅಗತ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಸೇವೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಸಿಮ್ಸ್‌ನಿಂದ ಜಿಲ್ಲಾಸ್ಪತ್ರೆ ಬೇರ್ಪಡಿಸುವುದು ಸುಲಭದ ಕೆಲಸವಲ್ಲ. ಜಿಲ್ಲಾಸ್ಪತ್ರೆ ಶಿಕಾರಿಪುರಕ್ಕೆ ಸ್ಥಳಾಂತರ ಆದ ನಂತರ ಶಿವಮೊಗ್ಗದಲ್ಲಿ ಹೊಸ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆಗಳು ನಡೆದಿದ್ದವು. ನಗರ ವ್ಯಾಪ್ತಿಯಲ್ಲಿ ಅಷ್ಟೊಂದು ಜಾಗವಿಲ್ಲ. ಭದ್ರಾವತಿಯಲ್ಲಿ ನಿರ್ಮಾಣ ಮಾಡಿದರೂ ರೋಗಿಗಳಿಗೆ ದೂರ ಆಗಲಿದೆ. ಹಾಗಾಗಿ ಹೊಸ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆ ಸದ್ಯಕ್ಕೆ ಮುಂದೂಡಿ, ಇರುವ ಆಸ್ಪತ್ರೆಯಲ್ಲೇ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಜತೆಗೆ ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.