ಕುಂದಾಪುರ: ಮಾಹಿತಿ ನೀಡದೆ ಕಾಮಗಾರಿ ನಡೆಸುವವರ ಮೇಲೆ ಕೇಸ್ ದಾಖಲಿಸಿ, ಅಭಿವೃದ್ಧಿ ಕಾಮಗಾರಿ ಟೆಂಡರ್‌ನಲ್ಲಿ ಕುಡಿಯುವ ನೀರು, ಮೆಸ್ಕಾಂ ಇತ್ಯಾದಿ ಕಾಮಗಾರಿಯ ದುರಸ್ತಿಗೆ ಯುಟಿಲಿಟಿ ದರ ನಿಗದಿಯಾಗಿದ್ದರೂ ಬಿಎಸ್‌ಎನ್‌ಎಲ್ ಸಂಸ್ಥೆ ಹೆಸರು ನಮೂದಾಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಜತೆ ಸಂವಹನ ನಡೆಸಲಾಗುವುದು. ಹೊಸ ಟವರ್‌ಗಳು, ಬ್ಯಾಟರಿಗಳ ಪೂರೈಕೆಗೆ ಪತ್ರ ಬರೆಯಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ದೂರವಾಣಿ ಸಮಸ್ಯೆ ಕುರಿತು ಗುರುವಾರ ಬಿಎಸ್‌ಎನ್‌ಎಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಪಂಚಾಯಿತಿಗಳ ಮೂಲಕ ಟವರ್ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಗೋಪಾಡಿ ಪಂಚಾಯಿತಿನಿಂದ ಆರಂಭಿಸಿ, ಉಡುಪಿ, ಚಿಕ್ಕಮಗಳೂರಿನಲ್ಲಿ ಪ್ರಾಯೋಗಿಕವಾಗಿ ನಡೆಸಬಹುದು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಟವರ್‌ಗಳ ನಿರ್ವಹಣೆ ಹೊಣೆ ಪಂಚಾಯಿತಿಗಳಿಗೇ ನೀಡುವ ಬಗ್ಗೆಯೂ ಕ್ರಮ ವಹಿಸಲಾಗುವುದು. ಪಂಚಾಯಿತಿ ಸಿಬ್ಬಂದಿ ಅಥವಾ ಸ್ಥಳೀಯರಿಗೆ ಮಾಸಿಕ ಗೌರವಧನ ನೀಡುವ ಮೂಲಕ ಜನರೇಟರ್ ಚಾಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಎಸ್‌ಎನ್‌ಎಲ್ ಅಧಿಕಾರಿಗಳು ಗ್ರಾಮ ಸಭೆಗಳಿಗೆ ಹಾಜರಾಗಿ ಜನರ ಸಮಸ್ಯೆ ಅರಿಯಬೇಕು ಎಂದು ಸಂಸದ ಕೋಟ ಹೇಳಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮಡಾಮಕ್ಕಿಯ ಹಂಜ, ಚೋರಾಡಿ, ಅಮಾಸೆಬೈಲಿನ ಬಳ್ಮ, ಕೆಳಸುಂಕ, ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ, ಕಬ್ಬಿನಾಲೆ ಮೊದಲಾದೆಡೆ ಹೊಸ ಟವರ್ ಅಳವಡಿಸಿದ್ದರೂ ಸಿಗ್ನಲ್ ಇಲ್ಲ, ಕರೆಯೂ ಹೋಗುವುದಿಲ್ಲ ಎಂದು ದೂರಿದರು.
ಗೋಪಾಡಿ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಬಿಎಸ್‌ಎನ್‌ಎಲ್ ಮಂಗಳೂರು ವೃತ್ತದ ಎಜಿಎಂ ಜನಾರ್ದನ್, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರಾದ ಪ್ರದೀಪ್ ಕೊಠಾರಿ, ಗೋಪಾಲಕೃಷ್ಣ, ಶೈಲೇಂದ್ರ ಶೆಟ್ಟಿ, ಎಜಿಎಂ ಬಿಂದು ಪ್ರಕಾಶ್, ಡಿಜಿಎಂ ಗೀತಾ ಕುಮಾರಿ, ಡಿಜಿಎಂ ಸತೀಶ್ ರಾವ್, ಎಸ್‌ಡಿಇ ಕೃಷ್ಣ ನಾಯಕ್, ಒಎಫ್‌ಸಿ ಜೆಟಿಒ ರಾಜೇಶ್, ಬೈಂದೂರು, ಶಂಕರನಾರಾಯಣ ಜೆಟಿಒ ದಿನೇಶ್, ಕುಂದಾಪುರ ಜೆಟಿಒ ರಾಜೇಂದ್ರ, ಸುಭಾಶ್ಚಂದ್ರ, ಮೆಸ್ಕಾಂ ಎಇಇ ವಿಜಯ ಕುಮಾರ್ ಶೆಟ್ಟಿ, ತಲ್ಲೂರು ಎಇ ಹರೀಶ್, ರಾಜೇಶ್ ಕಾವೇರಿ, ಸುಧೀರ್ ಕೆ.ಎಸ್., ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ.ಉಪಸ್ಥಿತರಿದ್ದರು.
ಖಾಸಗಿ ಸಂಸ್ಥೆಗಳ ಟವರ್, ಉಪಕರಣಗಳು ತಾಂತ್ರಿಕವಾಗಿ ಭಿನ್ನವಾಗಿವೆ. ವಿದೇಶಿ ಉಪಕರಣಗಳಾಗಿವೆ. ಪ್ರಸ್ತುತ ಬಿಎಸ್‌ಎನ್‌ಎಲ್ ಟಿಸಿಎಸ್ ಸಂಸ್ಥೆ ಮೂಲಕ ಸಿಡಾಟ್ ಉಪಕರಣಗಳನ್ನು 4ಜಿಗಾಗಿ ಬಳಸುತ್ತಿದ್ದು ಸಂಪೂರ್ಣ ದೇಸೀ ನಿರ್ಮಿತ ಉಪಕರಣಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಸರಿಪಡಿಸಲಾಗುತ್ತಿದೆ. ನವೀನ್ ಗುಪ್ತ, ಬಿಎಸ್‌ಎನ್‌ಎಲ್ ಮಂಗಳೂರು ವೃತ್ತದ ಪಿಜಿಎಂ https://www.vijayavani.net/community-outreach-program-at-hangarakatte-school https://www.vijayavani.net/leather-ball-cricket-tournament-from-21st