ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ನೂತನ ಕುಲಪತಿಯಾಗಿ ವಂ. ಸ್ಟೀಫನ್ ಡಿಸೋಜಾ ಅವರನ್ನು ನೇಮಕಗೊಳಿಸಿ ಧಮಾರ್ಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ.
ಉಡುಪಿಯ ಧಮಾರ್ಧ್ಯಕ್ಷರ ನಿವಾಸ ಚಾಪೆಲ್ನಲ್ಲಿ ಮಾ.31ರಂದು ನಡೆದ ಸರಳ ಧಾರ್ಮಿಕ ವಿಧಿ ಸಮಾರಂಭದಲ್ಲಿ ವಂ.ಸ್ಟೀಫನ್ ಡಿಸೋಜಾ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ಕುಲಪತಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ವಂ.ಸ್ಟೀಫನ್ ಡಿಸೋಜಾ ಅವರು 2009ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಬಿಜೈ ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ, ಮಂಗಳೂರು ಸಂತ ಜೋಸೆಫ್ ರ ಗುರುಮಠದಲ್ಲಿ ಪ್ರಾಧ್ಯಾಪಕರಾಗಿ, ಉಡುಪಿ ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.