ಜಿಲ್ಲೆ

ಉತ್ಸಾಹದಿಂದ ಬಂದು, ಸಾಧಿಸುವ ಛಲದೊಂದಿಗೆ ಹೆಜ್ಜೆ

Chitradurga

ಚಿತ್ರದುರ್ಗ: ತುಂಬಿದ ಒಂಬತ್ತು ಶಾಲಾ ವಾಹನದೊಂದಿಗೆ ನಗರದ ಪ್ರಸನ್ನ ಚಿತ್ರಮಂದಿರಕ್ಕೆ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬುಧವಾರ ಬಂದಿಳಿದರು. ಇದಕ್ಕೆ ಕಾರಣವಾಗಿದ್ದು, ‘ವಿಜಯಾನಂದ’ ಸಿನಿಮಾ. ವೀಕ್ಷಿಸುವ ತವಕದಲ್ಲಿದ್ದ ಎಲ್ಲರೂ ಶಿಸ್ತಿನ ಸಿಪಾಯಿಗಳಂತೆ ಚಿತ್ರಮಂದಿರ ಪ್ರವೇಶಿಸಿದರು.

ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿಗಳ ಮನದಲ್ಲಿ ಗಾಢವಾಗಿ ಬೇರೂರಿತು. ಪ್ರತಿ ಸನ್ನಿವೇಶವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮನದೊಳಗೆ ನಾಟಲು ಪ್ರೇರೇಪಣೆಯಾಯಿತು.

‘ವಿಜಯಾನಂದ’ ಸಿನಿಮಾದ ಸುಮಧುರ ಗೀತೆಗಳಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂತಸದಲ್ಲಿ ತೇಲಾಡಿದರು. ಸಾಹಸಮಯ ದೃಶ್ಯ, ಡೈಲಾಗ್‌ಗಳಿಗೆ ಕೇಕೆ, ಶಿಳ್ಳೆ, ಚಪ್ಪಾಳೆ ಸುರಿಮಳೆಗೈದು ಹರ್ಷ ವ್ಯಕ್ತಪಡಿಸಿದರು.

ತುಂಬಿದ ಚಿತ್ರಮಂದಿರದಲ್ಲಿ ಬಹುತೇಕ ಶಾಲೆಯ ವಿದ್ಯಾರ್ಥಿಗಳೆ ನೆರೆದಿದ್ದರು. 2.30 ತಾಸು ನವೋಲ್ಲಾಸದೊಂದಿಗೆ ವೀಕ್ಷಿಸಿ, ಸಾಧಿಸುವ ಛಲದೊಂದಿಗೆ ಹೊರನಡೆದರು. ಒಟ್ಟಾರೆ ವಿದ್ಯಾರ್ಥಿಗಳ ಸಂಭ್ರಮಕ್ಕೆ ‘ವಿಜಯಾನಂದ’ ಕಾರಣವಾಯಿತು. ರಾಕೇಶ್, ಗೌರವ್, ದೀಕ್ಷಿತ್ ಸೇರಿ ಅನೇಕ ವಿದ್ಯಾರ್ಥಿಗಳು ಸಿನಿಮಾ ಕುರಿತು ಅನಿಸಿಕೆ ಹಂಚಿಕೊಂಡರು.

*ಕೋಟ್

ಇದೊಂದು ಭಾವನಾತ್ಮಕ ಸಿನಿಮಾ. ವಿಜಯ ಸಂಕೇಶ್ವರ ಕುರಿತು ಅಚ್ಚುಕಟ್ಟಾಗಿ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕರಿಗೆ ಸ್ಫೂರ್ತಿ ನೀಡುವ ಕಥಾವಸ್ತು ಒಳಗೊಂಡಿದೆ. ಜತೆಗೆ ಹುಬ್ಬಳ್ಳಿಯಲ್ಲಿದ್ದಾಗ ಸಂಕೇಶ್ವರ ಮೊಮ್ಮಕ್ಕಳಾದ ಛಾಯಾ, ಶಿವ ಅವರಿಗೆ ಪಾಠ ಮಾಡಿದ್ದೇನೆ. ಉತ್ತಮ ಸಂಸ್ಕಾರ, ಸಂಸ್ಕೃತಿ ಹೊಂದಿರುವ ಕುಟುಂಬ.

ರಾಕೇಶ್ ಹೊಟ್ಕರ್ ಶಿಕ್ಷಕ

-----

*ಕೋಟ್

‘ವಿಜಯಾನಂದ’ ಹೆಸರೇ ಹೇಳುವಂತೆ ವಿಜಯದ ಹಾದಿಯಲ್ಲಿ ಮುನ್ನುಗ್ಗುವವರಿಗೆ ಆನಂದವು ಲಭಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಗುರಿ ಇದ್ದರೆ ಸಾಧನೆ ಕಷ್ಟವಲ್ಲ ಎನ್ನುವ ಅಂಶವನ್ನು ಸುಂದರವಾಗಿ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು. ವಿದ್ಯಾರ್ಥಿಗಳು ನೋಡಲೇಬೇಕಾದ ಸಿನಿಮಾ.

ರಾಧಾ ಶಿಕ್ಷಕಿ

-----

*ಕೋಟ್

ಹೊಸ ಬೆಳಕಿನ ಹುಡುಕಾಟದೊಂದಿಗೆ ಸಾಧಕರಾಗಬೇಕು ಎಂದು ಹೊರಟರೆ ಅದಕ್ಕೆ ಯಾರಾದರೂ ಸ್ಫೂರ್ತಿಯಾಗಲೇಬೇಕು. ಈ ರೀತಿಯ ಉತ್ತಮ ಸಿನಿಮಾ ಮಕ್ಕಳಲ್ಲಿ ಗುರಿ ಮುಟ್ಟಲು ನಾಂದಿಯಾಗಿದೆ. ವಿಜಯ ಸಂಕೇಶ್ವರ ಅವರ ರೀತಿಯಲ್ಲಿ ಬದುಕಲು ಪ್ರೇರಣೆಯಾಗಿದೆ.

ಪ್ರಜ್ವಲ್ ವಿದ್ಯಾರ್ಥಿ

---