ಜಿಲ್ಲೆ

ವಿಜ್ಞಾನ, ತಂತ್ರಜ್ಞಾನಕ್ಕೆ ಸ್ಟೆಮ್ ಲ್ಯಾಬ್ ನೆರವು

Gadag - Desk - Tippanna Avadoot

ಶಿರಸಿ:  ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ಬಗ್ಗೆ ಜ್ಞಾನ ಒದಗಿಸಬೇಕು. ಇದರಿಂದ ಅವರಿಗೆ ಭವಿಷ್ಯದಲ್ಲಿ ತಮ್ಮ ಶಿಕ್ಷಣದ ದಾರಿ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಹೇಳಿದರು.

ನಗರದ ಮಾರಿಕಾಂಬಾ ಪ್ರೌಢಶಾಲಾ ಆವರಣದಲ್ಲಿ ಸ್ಕೊಡ್​ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತ್ ಅವರ ಸಹಭಾಗಿತ್ವದಲ್ಲಿ ನೂತನವಾಗಿ ಆರಂಭಿಸಿರುವ ಸ್ಟೆಮ್ ಲ್ಯಾಬ್ ಹಾಗೂ ಬಾಲ ಹೆಲ್ತ್ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತನ ಪರಿಕಲ್ಪನೆಯೊಂದಿಗೆ ಆರಂಭಿಸಲಾದ ಸ್ಟೆಮ್ ಲ್ಯಾಬ್ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ವಿಭಾಗ ಹಾಗೂ ರೋಬೊಟಿಕ್ ವಿಜ್ಞಾನಗಳ ಕುರಿತ ಹೆಚ್ಚಿನ ಸಾಮರ್ಥ್ಯ ಬಲವರ್ಧನೆಗೆ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮುಂದಿನ ಉದ್ಯೋಗಪೂರಕ ಶಿಕ್ಷಣ ಹೊಂದಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇಸಾಯಿ ಫೌಂಡೇಶನ್, ಅಮೆರಿಕಾ ಅಧ್ಯಕ್ಷೆ ಮೇಘಾ ದೇಸಾಯಿ ಮಾತನಾಡಿ, ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದ್ದರೂ ಅಗತ್ಯ ಸೌಲಭ್ಯ ಹಾಗೂ ತರಬೇತಿ ಕೊರತೆಯಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಭವಿಷ್ಯದ ಎಲ್ಲಾ ಅವಕಾಶಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸ್ಟೆಮ್ ಲ್ಯಾಬ್ ಯೋಜನೆ ಆರಂಭಿಸಿದ್ದೇವೆ. ವಿದ್ಯಾರ್ಥಿ ದಿಸೆಯಲ್ಲಿಯೇ ತಮ್ಮಲ್ಲಿರುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಉನ್ನತ ವ್ಯಾಸಂಗ ಪಡೆಯಲು ಸಮರ್ಥರನ್ನಾಗಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಸ್ಕೊಡ್​ವೆಸ್ ಸಂಸ್ಥೆಯ ಸಹಯೋಗದೊಂದಿಗೆ ಈ ಪ್ರಯೋಗಾಲಯ ಆರಂಭಿಸಲಾಗಿದೆ ಎಂದರು.

ಎಷ್ಟೇ ಸೌಲಭ್ಯ ಒದಗಿಸಿದರೂ ಅನಾರೋಗ್ಯದ ಕಾರಣದಿಂದ ಇಂದಿಗೂ ಸುಮಾರು ಶೇ. 22ರಿಂದ ಶೇ. 27ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗುವುದು, ಶಾಲೆಯಿಂದ ಹೊರಗುಳಿಯುವುದನ್ನು ಗಮನಿಸಿದ್ದೇವೆ. ಈ ಕಾರಣಕ್ಕಾಗಿ ಮಕ್ಕಳಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸುವ ಪ್ರಾರಂಭದಲ್ಲಿಯೇ ಕಾಯಿಲೆಗಳ ಬಗ್ಗೆ ಜಾಗೃತಿ ಹೊಂದುವಂತೆ ಮಾಡುವ ಉದ್ದೇಶದಿಂದ ಬಾಲ ಹೆಲ್ತ ಮೇಳ ಎಂಬ ಬೃಹತ್ ಕಾರ್ಯಕ್ರಮವನ್ನೂ ಸಹ ಆಯೋಜಿಸುತ್ತಾ ಬರಲಾಗಿದ್ದು ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಆಯ್ದ ಸರ್ಕಾರಿ ಪ್ರೌಢಶಾಲೆಗಳಿಗೆ ಸಂಸ್ಥೆಯ ವತಿಯಿಂದ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದರು.

ಸ್ಕೊಡ್​ವೆಸ್ ಸಂಸ್ಥೆ ಕಾರ್ಯದರ್ಶಿ ಸರಸ್ವತಿ ಎನ್. ರವಿ ಮಾತನಾಡಿ, ಇಂದು ಚಾಲನೆಗೊಂಡ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದರು. </p><p> ದೇಸಾಯಿ ಫೌಂಡೇಶನ್ ಟ್ರಸ್ಟ್, ಗುಜರಾತ್​ನ ದಕ್ಷಿಣ ವಲಯದ ಕಾರ್ಯಕ್ರಮ ಅಧಿಕಾರಿ ಪ್ರಣವ್ ಸಿಂಗ್, ಮಾರಿಕಾಂಬಾ ಪ್ರೌಢಶಾಲೆಯ ಉಪಪ್ರಾಂಶುಪಾಲ ರಾಜೇಶ ನಾಯ್ಕ, ಸ್ಕೊಡ್​ವೆಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಕೂರ್ಸೆ, ಕಾರ್ಯಕಾರಿ ಸಮಿತಿ ಸದಸ್ಯ ಪೊ›.ಕೆ.ಎನ್. ಹೊಸಮನಿ ಮಾತನಾಡಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜಿಲ್ಲಾ ಸಮನ್ವಯಾಧಿಕಾರಿಗಳಾದ ಹೇಮಲತಾ ಚೌಗುಲೆ ವಂದಿಸಿದರು. ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು