ಸಿಂಧನೂರು: ಕೊಪ್ಪಳ ನಗರ ಹತ್ತಿರದ ಬಿಎಸ್‌ಪಿಎಲ್ ಕಂಪನಿ ಒಳಗಿರುವ ಕೆರೆಯಲ್ಲಿ ನೀರು ಕುಡಿಸಲು ದನಗಳ ನುಗ್ಗಿಸಿದ ರೈತರ ಮೇಲೆ ಕಂಪನಿ ನೌಕರರು ಹಲ್ಲೆ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಸಿಪಿಐ(ಎಂಎಲ್) ಮಾಸ್‌ಲೈನ್ ಹಾಗೂ ರೈತ ಸಂಘ ಶನಿವಾರ ಪ್ರತಿಭಟನೆ ನಡೆಸಿ, ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಿತು.
ಇದನ್ನೂ ಓದಿ: ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಮೋಸ: ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಆರೋಪ
ಕೊಪ್ಪಳ ನಗರದಿಂದ 3 ಕಿಮೀ ಅಂತರದಲ್ಲಿರುವ ಬಸಾಪುರ ಕೆರೆಯನ್ನು ಜನ, ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಬಿಎಸ್‌ಪಿಎಲ್ (ಬಲ್ಡೋಟಾ) ಕಂಪನಿ ಅವರು ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸಿದ್ದಾರೆ.
ಇದರಿಂದ ಸುತ್ತಲಿನ ಹಳ್ಳಿಗಳ ಕುರಿ, ಜಾನುವಾರುಗಳಿಗೆ ನೀರು ಕುಡಿಯಲು ಅವಕಾಶ ಇಲ್ಲದಂತಾಗಿದೆ. ಜು.25ರಂದು ಬಸಾಪುರ, ಹಾಲವರ್ತಿ ಇತರ ಗ್ರಾಮಗಳ ರೈತರು ಕುರಿ ಹಾಗೂ ದನಕರುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಹೋಗಿದ್ದಾರೆ.
ಈ ವೇಳೆ ಕಂಪನಿ ನೌಕರರು ತಡೆದು ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಖಂಡನೀಯ. ಕೊಪ್ಪಳ ನಗರ ಸುತ್ತಲೂ 20 ಹಳ್ಳಿಗಳ ಲಕ್ಷಾಂತರ ಜನರ ಆರೋಗ್ಯಕ್ಕೆ ಮಾರಕವಾಗಲಿರುವ ಉಕ್ಕಿನ ಕಾರ್ಖಾನೆ ಪರವಾನಗಿ ರದ್ದುಗೊಳಿಸಬೇಕು. ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಒಂಬತ್ತು ಜನರ ವಿರುದ್ಧ ದಾಖಲಿಸಿರುವ ಕೇಸ್ ವಾಪಸ್ ಪಡೆಯಬೇಕು. ವಿವಿಧ ಹಕ್ಕೊತ್ತಾಯಗಳ ಈಡೇರಿಸಬೇಕೆಂದು ಒತ್ತಾಯಿಸಿದರು.
ಸಿಪಿಐ (ಎಂಎಲ್) ಮಾಸ್‌ಲೈನ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್ ಬೇರ‌್ಗಿ, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಪ್ರಮುಖರಾದ ಯಲ್ಲಪ್ಪ ಚಿಕ್ಕಬೇರ‌್ಗಿ, ಶ್ಯಾಮೀದ್‌ಸಾಬ್, ಮಹ್ಮದ್ ಯಾಸಿನ್, ದುರ್ಗಾ ಪ್ರಸಾದ್, ವೆಂಕಟೇಶ ಉದ್ಬಾಳ, ಅಸ್ಲಂ, ಅನ್ವರ್ ಪಾಷಾ, ಈರೇಶಪ್ಪ, ಬಸವರಾಜ, ಬಸವರಾಜ ಕೋಟೆ, ಮಹ್ಮದ್‌ಹುಸೇನ, ನಿಂಗಪ್ಪ, ಬುಡನ್‌ಸಾಬ್, ಅಮೀನಸಾಬ್ ಇದ್ದರು.