ಲಕ್ಷ್ಮೇಶ್ವರ: ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರೈತರು ಗೊಬ್ಬರ ಖರೀದಿಸಲು ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಗುರುವಾರ ರಾತ್ರಿಯಿಡಿ ಗ್ರಾಮೀಣ ಪ್ರದೇಶಗಳ ಹಲವಾರು ರೈತರು ಪಟ್ಟಣದ ಗೊಬ್ಬರ ಅಂಗಡಿಯೊಂದರ ಮುಂದೆ ಮಲಗಿದ್ದಾರೆ.
ಯೂರಿಯಾ ಗೊಬ್ಬರಕ್ಕಾಗಿ ಪ್ರತಿದಿನ ರೈತರು ಸರದಿ ಸಾಲಲ್ಲಿ ನಿಲ್ಲುವ ಸ್ಥಿತಿ ನಿರ್ವಣವಾಗಿದೆ. ಬೆಳಗ್ಗೆ ಗದ್ದಲವಾಗುತ್ತದೆ. ಸರದಿ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ ಎಂದು ರೈತರು ರಾತ್ರಿಯೇ ಅಂಗಡಿ ಎದುರು ಟ್ರ್ಯಾಕ್ಟರ್ ನಿಲ್ಲಿಸಿ ಅದರಲ್ಲಿಯೇ ಪ್ಲಾಸ್ಟಿಕ್ ತಾಡಪತ್ರಿಗಳನ್ನು ಹೊದ್ದುಕೊಂಡು ಜಿಟಿಜಿಟಿ ಮಳೆಯಲ್ಲಿಯೇ ಮಲಗಿ ನಸುಕಿನ ಜಾವ ಸರದಿಯಲ್ಲಿ ನಿಂತು ಒಬ್ಬ ರೈತರು 2 ಚೀಲ ಗೊಬ್ಬರ ತೆಗೆದುಕೊಳ್ಳುತ್ತಿದ್ದಾರೆ.
ಕಳೆದ 8-10 ದಿನಗಳಿಂದಾಗುತ್ತಿರುವ ಮಳೆಯಿಂದ ಬೆಳೆ ಸಮೃದ್ಧವಾಗಿ ಬೆಳೆದಿವೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಬೇಕಾಗುವಷ್ಟು ಗೊಬ್ಬರ ಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.