ಜಿಲ್ಲೆ

ಬಸ್ ನಿಲ್ದಾಣದಲ್ಲೇ ಮಹಿಳೆಯರ ವಾಸ್ತವ್ಯ

ನರಗುಂದ: ತಾಲೂಕಿನಾದ್ಯಂತ ಗುರುವಾರ ಸುರಿದ ಮಳೆಯಿಂದ ನೂರಾರು ಮಹಿಳೆಯರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಲ ಕಳೆಯುವಂತಾಯಿತು.
ಬಣದ ಹುಣ್ಣಿಮೆ ಪ್ರಯುಕ್ತ ರೋಣ, ಬಾದಾಮಿ, ಕೊಪ್ಪಳ, ಗಜೇಂದ್ರಗಡ, ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಗುರುವಾರ ನರಗುಂದ ಮಾರ್ಗವಾಗಿ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ತೆರಳಿದ್ದರು. ಮಧ್ಯಾಹ್ನ ಧಾರಾಕಾರ ಮಳೆ ಸುರಿದು ತಾಲೂಕಿನ ಕುರ್ಲಗೇರಿ, ಯಾವಗಲ್ಲ, ಮೆಣಸಗಿ ಭಾಗದಲ್ಲಿ ಬೆಣ್ಣೆಹಳ್ಳ, ಕೊಳ್ಳಗಳು ಸಂಪೂರ್ಣ ತುಂಬಿ ಹರಿಯುತ್ತಿದ್ದವು. ಪರಿಣಾಮ ಈ ಮಾರ್ಗದ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಮಹಿಳಾ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲಾಗದೆ ನರಗುಂದ ಬಸ್ ನಿಲ್ದಾಣದಲ್ಲಿ ಮೈಕೊರೆಯುವ ಚಳಿಯಲ್ಲಿ ಮಲಗುವಂತಾಯಿತು. ಕೆಲವರು ಊಟ, ನೀರಿಲ್ಲದೆ ಪರದಾಡಿದರು. ಶುಕ್ರವಾರ ಬೆಳಗ್ಗೆ ಬೆಣ್ಣೆಹಳ್ಳದ ಪ್ರವಾಹ ಇಳಿಮುಖವಾಗಿದ್ದರಿಂದ ಬಸ್ ಸಂಚಾರ ಆರಂಭವಾಗಿ ಮಹಿಳೆಯರು ತಮ್ಮ ಊರುಗಳಿಗೆ ತೆರಳಿದರು.