ಗಂಡಸಿ ಹ್ಯಾಂಡ್ ಪೋಸ್ಟ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹೃದಯ ತಪಾಸಣೆ ನಡೆಸಲಾಯಿತು. ಡಾ. ಐಶ್ವರ್ಯಾ, ರಾಮಪ್ಪ, ದೀಕ್ಷಾ, ಅಶ್ವಿನಿ, ನಿರ್ಮಲಾ ಇತರರು ಇದ್ದರು. 
ಜಿಲ್ಲೆ

ಕೊಬ್ಬಿನ ಪದಾರ್ಥಗಳಿಂದ ದೂರವಿರಿ

ಗಂಡಸಿ: ಇತ್ತೀಚಿನ ದಿನಗಳಲ್ಲಿ ಬೊಜ್ಜು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ ಎಣ್ಣೆ, ಸಕ್ಕರೆ, ಅತಿ ಹೆಚ್ಚು ಕೊಬ್ಬಿನ ಅಂಶವಿರುವ ಪದಾರ್ಥಗಳ ಸೇವನೆಯಿಂದ ಆದಷ್ಟು ದೂರ ಉಳಿಯುವುದು ಒಳಿತು ಎಂದು ಕೊಂಡೆನಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ ತಿಳಿಸಿದರು.

ಹೋಬಳಿಯ ಗಂಡಸಿ ಹ್ಯಾಂಡ್‌ಪೋಸ್ಟ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಮತ್ತು ಕಾಲೇಜು, ಪುಷ್ಪರವಿ ನ್ಯಾಷನಲ್ ಸ್ಕೂಲ್ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳೇ ದೇಶದ ಆಸ್ತಿಯಾಗಿದ್ದು, ಪಾಲಕರು ತಮ್ಮ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳಿಗೆ ಬೀದಿ ಬದಿ ಮಾರಾಟ ಮಾಡುವ ಪದಾರ್ಥಗಳು, ಜಂಕ್ ಫುಡ್, ಸ್ನಾೃಕ್ಸ್, ಎಣ್ಣೆಯಲ್ಲಿ ಕರಿದ ಎಣ್ಣೆ ಪದಾರ್ಥಗಳನ್ನು ಕೊಡಿಸಬಾರದು. ಮನೆಯಲ್ಲೇ ತಯಾರಿಸಿದ ಪೌಷ್ಟಿಕಾಂಶವುಳ್ಳ ಆಹಾರ ನೀಡುವುದು, ಪ್ರತಿದಿನ ವ್ಯಾಯಾಮ ಮಾಡಿಸುವ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಪಾಲಕರ ಮುಖ್ಯ ಕರ್ತವ್ಯವಾಗಿದೆ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡ ತಕ್ಷಣ ಪ್ರಾಥಮಿಕ ಹಂತದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.

ತಪಾಸಣಾ ಶಿಬಿರದಲ್ಲಿ 650 ವಿದ್ಯಾರ್ಥಿಗಳ ಹೃದಯ ತಪಾಸಣೆ ನಡೆಸಲಾಯಿತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ ಅನುವಂಶೀಯತೆಯ ಹೃದಯ ಸಂಬಂಧಿ ಲಕ್ಷಣಗಳು ಕಂಡುಬಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು.

ಆರೋಗ್ಯ ನಿರೀಕ್ಷಣಾಧಿಕಾರಿ ರಾಮಪ್ಪ, ಆರೋಗ್ಯ ಕಾರ್ಯಕರ್ತೆಯರಾದ ದೀಕ್ಷಾ, ಅಶ್ವಿನಿ, ಆಶಾ ಕಾರ್ಯಕರ್ತೆ ನಿರ್ಮಲಾ ಇತರರು ಇದ್ದರು.