ಮೈಸೂರು: ಮೈಸೂರು ನಗರ ಪೊಲೀಸ್ ವತಿಯಿಂದ ಮಾದಕ ವಸ್ತು ವಿರುದ್ಧ ಜಾಗೃತಿ ಮೂಡಿಸುವ ಸಂಬಂಧ ವಾಕಾಥಾನ್ ಹಮ್ಮಿಕೊಳ್ಳಲಾಗಿತ್ತು.
ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ವಾಕಾಥಾನ್, ಜಯಚಾಮರಾಜೇಂದ್ರ ವೃತ್ತ, ಗನ್ ಹೌಸ್ ವೃತ್ತ, ಸಂಸ್ಕೃತ ಪಾಠಶಾಲೆ, ಕೆ.ಆರ್.ವೃತ್ತ, ಆಯುರ್ವೇದ ಆಸ್ಪತ್ರೆ ವೃತ್ತ, ಅಶೋಕ ರಸ್ತೆ ಮೂಲಕ ಸಾಗಿ ಅರಮನೆ ಮುಂಭಾಗ ಅಂತ್ಯಗೊಂಡಿತು. ನಗರದ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಆಗುವ ಅನಾಹುತಗಳನ್ನು ತಿಳಿಸುವ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದರು.
ಇದಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಭವಿಷ್ಯ ಹಾಳುಮಾಡಿಕೊಳ್ಳಬಾರದು. ಮಾದಕ ವಸ್ತುಗಳು ಜೀವನವನ್ನು ಹಾಳುಮಾಡುವುದಲ್ಲದೆ, ಅವರ ಕುಟುಂಬವನ್ನೂ ಸಂಕಷ್ಟಕ್ಕೀಡು ಮಾಡುತ್ತದೆ. ಹೀಗಾಗಿ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೂರವಿರಬೇಕು ಎಂದರು.
ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಲು ಇಲಾಖೆಯಿಂದ ತಂಡವನ್ನು ರಚಿಸಲಾಗಿದೆ. ತಂಡದ ಸಿಬ್ಬಂದಿ ಆಗಾಗ್ಗೆ ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಡಿಸಿಪಿಗಳಾದ ಎಂ.ಮುತ್ತುರಾಜ್, ಜಾಹ್ನವಿ, ಎಸಿಪಿಗಳಾದ ಸಂದೇಶ್ ಕುಮಾರ್, ಶಾಂತಮಲ್ಲಪ್ಪ, ಮಾರುತಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಇದ್ದರು.