ಮುಂಡರಗಿ: ಸಿರಿಧಾನ್ಯಗಳ ಬದಲಾಗಿ ಸತ್ವರಹಿತ ಹಾಗೂ ಸಂಸ್ಕರಿಸಿದ ಆಹಾರ ಸೇವಿಸುತ್ತಿದ್ದೇವೆ. ರಾಸಾಯನಿಕ ಬಳಸಿ ತಯಾರಿಸುವ ಆಹಾರ ಪದಾರ್ಥಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜೆ.ಬಿ. ಬೀಡನಾಳ ಎಚ್ಚರಿಸಿದರು.
ತಾಲೂಕಿನ ಕಲಕೇರಿ- ವಿರುಪಾಪುರ ಗ್ರಾಮದ ಗುರು ಮುದುಕೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಶ್ರೀಗಳ 25ನೇ ತುಲಾಭಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿ, ಮಠಗಳಲ್ಲಿ ಜರುಗುವ ಸಭೆ, ಸಮಾರಂಭ, ಶಿವಾನುಭವ, ಧರ್ಮಸಭೆಗಳಲ್ಲಿ ಸ್ವಾಮೀಜಿಗಳು ನಮಗೆ ಆಧ್ಯಾತ್ಮ ಬೋಧಿಸುತ್ತಾರೆ. ಅವರು ನಮ್ಮ ಸುಂದರ ಬದುಕಿಗೆ ದಾರಿದೀಪವಾಗುತ್ತಾರೆ. ಮನೆಯಲ್ಲಿ ಪಾಲಕರು ಮಕ್ಕಳಿಗೆ ದೇಶಪ್ರೇಮ ಕಲಿಸಬೇಕು. ಆ ಮೂಲಕ ಮಕ್ಕಳನ್ನು ದೇಶಪ್ರೇಮಿಗಳನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬನ್ನಿಕೊಪ್ಪ, ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕೊಪ್ಪಣ್ಣವರ ಹಾಗೂ ಮನೋಹರ ಮುದ್ಲಾಪುರ ಹಾಗೂ ಕುಟುಂಬ ವರ್ಗದವರಿಂದ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ತುಲಾಭಾರ ನಡೆಯಿತು. ಕಮಲಮ್ಮ ಪಾಟೀಲ ಹಾಗೂ ಕುಟುಂಬ ವರ್ಗದವರು ದಾಸೋಹ ಸೇವೆ ಸಲ್ಲಿಸಿದರು.
ಅಂದಪ್ಪ ಮೇಟಿ, ಡಾ.ವೈ.ಎಸ್. ಮೇಟಿ, ಪಿ.ಎಂ.ಪಾಟೀಲ, ಈರಪ್ಪ ತಾಂಬ್ರಗುಂಡಿ, ಸಂತೋಷ ಆನೇಕಲ್ಲ, ಚನ್ನಪ್ಪ ನಾಯಕ ಇತರರಿದ್ದರು. ಬಸನಗೌಡ ಹಿರೇಗೌಡರ ಪ್ರಾರ್ಥಿಸಿದರು. ಕಾಶಿನಾಥ ಬಿಳಿಮಗ್ಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಂಕಪ್ಪ ಯಕ್ಲಾಸಪುರ ಸ್ವಾಗತಿಸಿ, ಜಯಣ್ಣ ದ್ರಾಕ್ಷಿ ನಿರೂಪಿಸಿ, ಎಸ್.ಎನ್. ಪಾಟೀಲ ವಂದಿಸಿದರು.