ಬೆಟ್ಟದಪುರ: ಯುವಜನತೆ ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳಿಗೆ ಒಳಗಾಗದೆ ಉತ್ತಮ ಹವ್ಯಾಸವನ್ನು ರೂಢಿಸಿಕೊಂಡು ಚಂದದ ಬದುಕು ರೂಪಿಸಿಕೊಳ್ಳಬೇಕು ಎಂದು ಜವನಿಕಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಗದೀಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಆಯೋಜಿಸಿದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಮೋಜು ಮಸ್ತಿಗಾಗಿ ಸಿಗರೇಟ್, ಗಾಂಜಾ ಸೇವನೆ ಮಾಡುತ್ತಾರೆ. ಇದರ ಜತೆಗೆ ಮದ್ಯಪಾನವನ್ನು ಸೇವಿಸಿ ಮುಂದೆ ಅದನ್ನೇ ಚಟವಾಗಿಸಿಕೊಳ್ಳುತ್ತಾರೆ. ಇದರಿಂದ ಬದುಕು ಹಾಳಾಗಲಿದೆ. ವಿದ್ಯಾರ್ಥಿಗಳು ಇಂಥ ದುಶ್ಚಟಗಳನ್ನು ಕಲಿಯುವ ಮುನ್ನ ಭವಿಷ್ಯದ ಬದುಕಿನ ಬಗ್ಗೆ ಒಳ್ಳೆಯ ರೀತಿಯಲ್ಲಿ ಯೋಚಿಸಬೇಕು ಎಂದು ಹೇಳಿದರು.
ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಮಾತನಾಡಿ, ಉತ್ತಮ ಪುಸ್ತಕಗಳು ನಮ್ಮ ಬದುಕನ್ನು ರೂಪಿಸುತ್ತವೆ. ಅವುಗಳನ್ನು ಓದುವ ಮೂಲಕ ಸಂತೋಷ ಮತ್ತು ಜ್ಞಾನ ಪಡೆದುಕೊಳ್ಳಬೇಕು. ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಅವರಂತಹ ನಾಯಕರನ್ನು ನೀಡಿದ ದೇಶ ನಮ್ಮದು. ಅವರ ಆದರ್ಶ ಮತ್ತು ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಅಭಿಜಿತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ಮೂಡಿಸುವುದರ ಜತೆ ಉತ್ತಮ ಬದುಕಿನತ್ತ ಕೊಂಡೊಯ್ಯುವ ಮಾರ್ಗದರ್ಶನ ಬಹಳ ಮುಖ್ಯ. ಈ ಕಾರಣದಿಂದ ಉತ್ತಮ ವ್ಯಕ್ತಿಗಳನ್ನು ಕರೆಸಿ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಸುನೀತಾ ಶೆಟ್ಟಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಸೇವಾ ಪ್ರತಿನಿಧಿ ಆರತಿ, ಉಪನ್ಯಾಸಕರಾದ ಶಿವನಂಜು, ರಜನಿ, ನವೀನ್, ಅರ್ಪಿತಾ,ಸುಧಾ ಇದ್ದರು.