ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಹಾಗೂ ದೆಹಲಿಯಲ್ಲಿ ರೈತ ನಾಯಕ ಜಗಜಿತ್ ಸಿಂಗ್ ದಲೈವಾಲಾ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, 26ರಂದು ರಾಜ್ಯಾದ್ಯಂತ ಟ್ರ್ಯಾಕ್ಟರ್ ಚಳವಳಿ ನಡೆಸಲಿದೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಮತ್ತು ಮಾರಕ ಕೃಷಿ ತಿದ್ದುಪಡಿ ಕಾಯ್ದೆ ಕೈಬಿಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ದಲೈವಾಲಾ ಆಮರಣಾಂತ ಉಪವಾಸ ಸತ್ಯಗ್ರಹ ಕೈಗೊಂಡಿದ್ದಾರೆ. ದಲೈವಾಲಾ ಪ್ರಾಣದ ಜೊತೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧವೆಂದು 111 ರೈತರು ಉಪವಾಸ ಆರಂಭಿಸಿದ್ದಾರೆ. ಆದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದನ್ನು ಖಂಡಿಸಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಚಳವಳಿ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
"ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ' ಎಂಬಂತೆ ಕೇಂದ್ರ ವರ್ತಿಸುತ್ತಿದೆ. ರೈತ ಚಳವಳಿಯನ್ನು ದುರ್ಬಲಗೊಳಿಸಲು ಪ್ರಯತ್ನ ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದರು. 2011ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ರೈತರ ಉತ್ಪನ್ನಗಳಿಗೆ ಎಂಎಸ್ಪಿ ಖಾತರಿ ಕಾನೂನು ಜಾರಿ ಆಗತ್ಯವಿದೆ ಎಂದಿದ್ದರು. ಆದರೆ, 14 ವರ್ಷ ಕಳೆದರೂ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಷ್ಟ್ರೀಯ ಕಿಸಾನ್ ಸಂಘದ ಭೀಮಯ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಸುರೇಶ್ ಪಾಟೀಲ್ ಸೇರಿ ಮತ್ತಿತರರಿದ್ದರು.
ಹಲವು ನಿರ್ಣಯ:
ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು. ಪ್ರಗತಿಪರ, ವಿದ್ಯಾರ್ಥಿ, ಕಾರ್ಮಿಕರ ಸಂಟನೆ, ಚಿಂತಕರು, ಸಾಹಿತಿಗಳು, ಕಲಾವಿದರು, ನಟರು ಸೇರಿ ಎಲ್ಲ ವರ್ಗಗಳ ಸಂಟನೆಗಳ ಮುಖಂಡರೊಂದಿಗೆ ಹೋರಾಟಕ್ಕೆ ಬೆಂಬಲ ನೀಡುವಂತೆ ಹಾಗೂ ಹಳ್ಳಿಗಳಲ್ಲಿ ಹೋರಾಟ ಬಗ್ಗೆ ಜಾಗೃತಿ ಮೂಡಿಸುವುದು ಸೇರಿ ಇತರೆ ವಿಚಾರಗಳ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ಕೇಂದ್ರಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ತಿಳಿಸಿದರು.
ಕೇಂದ್ರ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ತಮ್ಮ ಸ್ವಪ್ರತಿಷ್ಠೆ ಬಿಟ್ಟು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಮಂತ್ರಿಗಳ ಜೊತೆಗೆ ತೆರಳಿ ಉಪವಾಸ ನಿರತ ದಲೈವಾಲಾ ಬಳಿ ಮಾತುಕತೆ ನಡೆಸಬೇಕು. ಈ ಮೂಲಕ ಅವರ ಪ್ರಾಣ ಅಪಾಯ ತಪ್ಪಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಕೇಂದ್ರ ಮಂತ್ರಿಗಳೇ ಕಾರಣರಾಗುತ್ತಾರೆ.
| ಕರಬಸಪ್ಪಗೌಡ, ರಾಜ್ಯ ಹಸಿರು ಸೇನೆ ಅಧ್ಯಕ್ಷ.