ಜಿಲ್ಲೆ

ಎನ್‌ಇಪಿ ಜಾರಿಗೆ ರಾಜ್ಯಾದ್ಯಂತ ಸಹಿ ಅಭಿಯಾನ : ಡಾ.ಈ.ಸಿ.ನಿಂಗರಾಜ್‌ಗೌಡ

ಮೈಸೂರು: ‘ರಾಷ್ಟ್ರಕ್ಕೊಂದೇ ಶಿಕ್ಷಣ ನೀತಿ’ ಇರಬೇಕೆಂಬ ಆಶಯವನ್ನು ರಾಜೀವ್ ಗಾಂಧಿ ಹೊಂದಿದ್ದರು. ಆದರೆ ಈಗ ಅದೇ ಪಕ್ಷದವರು ರಾಜ್ಯದಲ್ಲಿ ರಾಜಕಾರಣ ಮಾಡುವ ಉತ್ಸಾಹದಲ್ಲಿ ಅದನ್ನು ಮರೆತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಕಿಡಿಕಾರಿದರು.

ಶಿಕ್ಷಣ ವಲಯವನ್ನು ರಾಜಕೀಯದಿಂದ ಹೊರಗಿಡುವ ಜವಾಬ್ದಾರಿಯನ್ನು ತಾವೂ ಮುಂದುವರಿಸಿ ಎನ್ನುವ ಹಕ್ಕೊತ್ತಾಯದ ಬೇಡಿಕೆ ನಮ್ಮದಾಗಿದೆ. ಎನ್‌ಇಪಿ-2020 ಅಳವಡಿಕೆಯನ್ನು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರದ್ದುಪಡಿಸದೆ, ಮುಂದುವರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರದ ಎಸ್‌ಇಪಿ ನಿಲುವಿನ ಹಿನ್ನೆಲೆ ಕುರಿತು ಶಿಕ್ಷಣ ಕ್ಷೇತ್ರವಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಪಾಲಕರಿಗೂ ಅರಿವಿದೆ ಮತ್ತು ಅಸಮಾಧಾನವಿದೆ ಎಂಬುದು ಎನ್‌ಇಪಿ-2020ರ ಕುರಿತು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ನಡೆಸಿದ ಜಾಗೃತಿ ಕಾರ್ಯಕ್ರಮ, ಸಹಿ ಸಂಗ್ರಹ ಅಭಿಯಾನದ ವೇಳೆ ಸ್ಪಷ್ಟವಾಗಿದೆ ಎಂದರು.

ಕೇವಲ ಒಂದು ತಿಂಗಳ ಕಾಲ ರಾಜ್ಯಾದ್ಯಂತ ನಡೆಸಿದ ಸಹಿ ಚಳವಳಿಯಲ್ಲಿ 80 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ವಿಶೇಷವಾಗಿ ಎನ್‌ಇಪಿಯ ಪ್ರಮುಖ ಪಾತ್ರಧಾರಿಗಳಾದ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಪರ್ಯಾಯವಾಗಿ ಎಸ್‌ಇಪಿ ರಚಿಸುತ್ತಿರುವ ರಾಜ್ಯ ಸರ್ಕಾರ ಇದುವರೆಗೂ ಎನ್‌ಇಪಿ ಏಕೆ ಬೇಡವೆಂದು ರಾಜಕಾರಣದ ನಿಲುವಿನ ಹೊರತಾಗಿ ಸ್ಪಷ್ಟಪಡಿಸಿಲ್ಲ. ಸಹಿ ಸಂಗ್ರಹದ ಪ್ರತಿಗಳ ಕಡತಗಳನ್ನು ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರೊ.ಜಿ.ಸಿ.ರಾಜಣ್ಣ, ಎಂ.ಶಿವು, ಪ್ರಜ್ವಲ್, ಪ್ರೊ.ಜಯಣ್ಣ ಇದ್ದರು.