ಜಿಲ್ಲೆ

ಬಿಜೆಪಿ ಎಸ್ ಟಿ ಮೋರ್ಚಾದಿಂದ 28ರಂದು ರಾಜ್ಯಾದ್ಯಂತ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆ ವಿಚಾರದಲ್ಲಿ ರಾಜ್ಯಾದ್ಯಂತ ಜೂ. 28 ಹಮ್ಮಿಕೊಂಡಿರುವ ಪ್ರತಿಭಟನೆ ಸಂಬಂಧ ಬುಧವಾರ ಬಿಜೆಪಿ ಎಸ್‌ಟಿ ಮೋರ್ಚಾ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಚಾಮರಾಜಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಅದು ಆಭರಣದ ಅಂಗಡಿ, ಬಾರ್‌ಗಳ ಮಾಲೀಕರ ಮೂಲಕ ವರ್ಗಾವಣೆ ಮಾಡಿದ್ದು ಅಕ್ಷಮ್ಯ ಎಂದು ಟೀಕಿಸಿದರು.
ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ಮೂಲಕ ಈ ಅಕ್ರಮ ಹೊರಗೆ ಬಂದಿದೆ. ರಾಜ್ಯ ಸರ್ಕಾರ ಪರಿಶಿಷ್ಟ ವರ್ಗದ ನಿರುದ್ಯೋಗ ಯುವಕರ ರೈತರ ಗಂಗಾ ಕಲ್ಯಾಣ ಯೋಜನೆ ಗೂಡಂಗಡಿ ಇಡಲು ಆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಎಸ್‌ಟಿ ಸಮುದಾಯದ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಹಗರಣದ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ, ಅದನ್ನು ಪರಿಶಿಷ್ಟ ಪಂಗಡದವರು ಇರುವ ಗ್ರಾಮದ ಹಾಗೂ ಕೇರಿಗಳಲ್ಲಿನ ಪ್ರತಿ ಮನೆಗೂ ತಲುಪಿಸಿ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸಲಾಗುವುದು. ಕಾರ್ಯಕರ್ತರು ಇದಕ್ಕೆ ಕೈ ಜೋಡಿಸಬೇಕು ಎಂದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಎಸ್‌ಟಿ ಕಲ್ಯಾಣ ಕಾರ್ಯಕ್ರಮದಡಿ ಆಗಿರುವ ಅಕ್ರಮ ವಿಚಾರವನ್ನು ಜನರಿಗೆ ತಿಳಿಸಲು ಹೆಚ್ಚಿನ ಸಂಖ್ಯೆಯ ಜನರು ಸೇರಿಸಲು ಎಲ್ಲ ರೀತಿಯ ಸಹಕಾರ ನೀಡುವುದರ ಮೂಲಕ ಪ್ರತಿಭಟನೆ ಯಶಸ್ವಿಯಾಗಿಸಲು ಮೋರ್ಚಾ ಪ್ರಮುಖರಿಗೆ ತಿಳಿಸಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಮೈಸೂರು ಮಹಾನಗರ (ಜಿಲ್ಲಾ) ಎಸ್‌ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ಪಕ್ಷದಿಂದ ಮುಖಂಡರನ್ನು ಮೇಲುಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಜಿಲ್ಲೆಯ ಮಾಜಿ ಸಚಿವರು, ಹಾಲಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮೈಸೂರು ನಗರ, ಗ್ರಾಮಾಂತರ ಮೋರ್ಚಾ, ಯುವ, ಮಹಿಳಾ, ಓಬಿಸಿ, ಪ.ಜಾತಿ ಮೋರ್ಚಾ ಸೇರಿದಂತೆ ಎಲ್ಲ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಕೈಜೋಡಿಸಿ ಹೋರಾಟದ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕು ಎಂದು ಕೋರಿದರು.
ಮಾಜಿ ಮೇಯರ್ ಶಿವಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯ ಮುತ್ತಿಗೆ ಹೋರಾಟದ ರೂಪುರೇಷೆ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು. ಗ್ರಾಮಾಂತರ ಎಸ್‌ಟಿ ಮೋರ್ಚಾ ಅಧ್ಯಕ್ಷ ಮುದ್ದುಕೃಷ್ಣ, ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಂ ಮಹೇಶ್, ಪ್ರಶಾಂತ್ ಕಾರ್ಯ, ನಗರ ಪ್ರಧಾನ ಕಾರ್ಯದರ್ಶಿ ನಾರಾಯಣ ಲೋಲಪ್ಪ, ಮುಖಂಡರಾದ ಕೃಷ್ಣನಾಯಕ, ಎಸ್. ತ್ಯಾಗರಾಜ್, ಬಾಲರಾಜು, ಸಿದ್ದರಾಜು, ಕೆ.ಆರ್. ಕ್ಷೇತ್ರ ಮಂಡಲದ ಅಧ್ಯಕ್ಷ ನಂದೀಶ್ ನಾಯಕ, ವಿಜಯ್, ನರಸಿಂಹ ಕ್ಷೇತ್ರದ ಮಂಡಲದ ಅಧ್ಯಕ್ಷ ಜಗದೀಶ್ ಲಕ್ಷ್ಮಣ್, ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ರಾಜನಾಯಕ, ಮುಖಂಡರಾದ ಉದ್ಭೂರು ಉಮೇಶ್, ರಮ್ಮನಹಳ್ಳಿ ಮದಕರಿ, ಗೋಪಿ, ಲೋಹದ ಜಯಸಿಂಹ, ನಾಗರಾಜ್, ಗೋಕುಲಂ ನಾಗು, ರಂಗಸ್ವಾಮಿ, ರವಿಕುಮಾರ್, ಹಿನಕಲ್ ಚಂದ್ರ ,ಅಮೃತ್, ಗಂಗಾಧರ್, ಸಿ.ಎನ್.ಚಂದ್ರು ಇತರರು ಇದ್ದರು.