ಸಿಎಂ ಸಿದ್ದರಾಮಯ್ಯ 
ಜಿಲ್ಲೆ

ರಾಜ್ಯಾದ್ಯಂತ ಜ.26 ರಿಂದ ಸಂವಿಧಾನ ಜಾಗೃತಿ ಜಾಥಾ : ಸಿಎಂ ಸಿದ್ದರಾಮಯ್ಯ

ಸದೇಶ್ ಕಾರ್ಮಾಡ್

ಮೈಸೂರು: ಸಂವಿಧಾನದ ಅಮೃತ ಮಹೋತ್ಸವ ಪ್ರಯುಕ್ತ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಜ.26 ರಿಂದ ಫೆ.25 ರವರೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜ.26 ರಂದು ಜಾಥಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು. ಅದಾದ ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಜಾಥಾಗಳನ್ನು ನಡೆಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.24 ರಂದು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಫೆ.25 ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನದ ಮೂಲ ಅಂಶಗಳಾದ ಧರ್ಮನಿರಪೇಕ್ಷತೆ, ಜಾತ್ಯಾತೀತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರೃ ಒದಗಿಸುವ ವಿಧಿಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಖಾತ್ರಿಪಡಿಸುವ ವಿಷಯಗಳ ಬಗೆಗೆ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ ಎಂದರು.

ಸಂವಿಧಾನ ರಕ್ಷಣೆ ಎಂದರೆ ಅದು ಜನರ ರಕ್ಷಣೆ ಮಾಡಿದಂತೆ. ಆದ್ದರಿಂದ ಸಂವಿಧಾನ ರಕ್ಷಣೆಗೆ ಎಲ್ಲರು ಮುಂದಾಗಬೇಕು. ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕಸನಕ್ಕೆ ಸಂವಿಧಾನವನ್ನು ಬಲಪಡಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಿ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಹಾಗೂ ಜಾತ್ಯತೀತ, ಸಮಸಮಾಜ ನಿರ್ಮಾಣ ಮಾಡುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಸಂವಿಧಾನದ ಮೂಲಕ ಅಂಬೇಡ್ಕರ್ ಎಲ್ಲರಿಗೂ ನ್ಯಾಯ ಕೊಡುವ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಆಯಾ ಕಾಲಘಟ್ಟಕ್ಕೆ ಸೂಕ್ತವಾಗಿ ತಿದ್ದುಪಡಿಯಾಗಿವೆ. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಯನ್ನು ನೋಡಿದಾಗ ಸಂವಿಧಾನದ ಬಗ್ಗೆ ಗೌರವ ಇಲ್ಲದ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಹಾಗೂ ತಪ್ಪು ಅಭಿಪ್ರಾಯ ಮೂಡಿಸುವ ಹಾಗೂ ಸಂವಿಧಾನ ಆಶಯಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುವವರಿಗೆ ಉತ್ತರ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಕೆಲವರು ಸಂವಿಧಾನ ಮನುಶಾಸ್ತ್ರಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆಲ್ಲ ಉತ್ತರ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಂವಿಧಾನ ರಚನಾ ಸಭೆಯಲ್ಲಿ ನಡೆದ ಅರ್ಥಪೂರ್ಣ ಚರ್ಚೆಗಳ 10 ಸಂಪುಟಗಳ ಕೃತಿಗಳನ್ನು ರಾಜ್ಯ ಸರ್ಕಾರ ಮುದ್ರಿಸಿ ಬಿಡುಗಡೆ ಮಾಡಿದೆ. ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಅಮೋಘ ಭಾಷಣ ಈ ಕೃತಿಯಲ್ಲಿದೆ. ಅಲ್ಲದೆ, ಡಾ.ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ವಿವಿಧ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿ ಇದೆ ಎಂದರು.