ಜಿಲ್ಲೆ

ದೇಗುಲಗಳ ಮೇಲೆ ಮಠಗಳ ಕಣ್ಣು, ಹುನ್ನಾರಕ್ಕೆ ಅರ್ಚಕರ ಕಿಡಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಹಲವು ದೇವಾಲಯಗಳು ದುಸ್ಥಿತಿಗೆ ತಲುಪಿರುವುದರ ಕಡೆಗೆ ಗಮನಹರಿಸದಿರುವುದರ ನಡುವೆ ರಾಜ್ಯದ ಮಠಗಳು, ಇದೀಗ ಕೆಲ ದೇವಾಲಯಗಳನ್ನು ಸುಪರ್ದಿಗೆ ಪಡೆಯುವ ಹುನ್ನಾರ ನಡೆಸುತ್ತಿವೆ ಎಂದು ಅರ್ಚಕ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಕಿಡಿಕಾರಿದರು.

ದೇವಾಲಯಗಳ ಆಸ್ತಿ, ಜಮೀನನ್ನು ಬಡವರಿಗೆ ನೀಡಿ ಸಂಕಷ್ಟದ ಸ್ಥಿತಿಯಲ್ಲಿದ್ದ ವೇಳೆ ರಾಜ್ಯದ 318 ಮಠಗಳ ಪೈಕಿ ಯಾವುದೇ ಮಠ ದೇವಾಲಯಗಳ ಸಮಸ್ಯೆಗಳ ಕುರಿತು ಚಕಾರ ಎತ್ತಿರಲಿಲ್ಲ. ಆದರೆ, ದೇವಾಲಯಗಳನ್ನು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಜೀರ್ಣೋದ್ಧಾರಗೊಳಿಸಿದ ಬಳಿಕ ಕೆಲ ಮಠಾಧಿಪತಿಗಳು ಕಣ್ಣಾಕಿದ್ದಾರೆ ಎಂದು ಚಿಕ್ಕಬಳ್ಳಾಪುರ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮುಜುರಾಯಿ ಇಲಾಖೆಯ ವ್ಯಾಪ್ತಿಯಲ್ಲಿ 205 ಎ ದರ್ಜೆಯ ದೇವಾಲಯಗಳು, 193 ಬಿ ದರ್ಜೆಯ ದೇವಾಲಯ ಹಾಗೂ 36517 ಸಿ ದರ್ಜೆಯ ದೇವಾಲಯಗಳಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ಈ ದೇವಾಲಯಗಳಲ್ಲಿ ಅರ್ಚಕ-ಆಗಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತತ 50 ವರ್ಷಗಳ ಹೋರಾಟದ ಪ್ರತಿಫಲವಾಗಿ ಪೂಜಾಕೈಂಕರ್ಯಗಳಿಗೆ ತಸ್ತಿಕ್ 5 ಸಾವಿರ ರೂಗಳನ್ನು ನೀಡುತ್ತಿದ್ದು ಇದನ್ನು ಹೆಚ್ಚಿಸಬೇಕು. ಅರ್ಚಕ ಆಗಮಿಕರಿಗೆ ಪ್ರತಿ ತಿಂಗಳು 10 ಸಾವಿರ ರೂಗಳ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಧಾರ್ಮಿಕ ದತ್ತಿ ದೇವಾಲಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ, ಅರ್ಚಕ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಗೌರವ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಸಹಕಾರ್ಯದರ್ಶಿ ಟಿ.ಕೆ.ಶಾಮಸುಂದರ ದೀಕ್ಷಿತ್, ಅರ್ಚಕರಾದ ನಂದಿ ಬೆಟ್ಟದ ನಾಗರಾಜ್, ರಾಜಗೋಪಾಲ್, ರಾಮಕೃಷ್ಣ ಮತ್ತಿತರರು ಇದ್ದರು.

* ರಾಜ್ಯ ಮಟ್ಟದ ಸಮಾವೇಶ

ಬೆಂಗಳೂರಿನ ಪುರಭವನದಲ್ಲಿ ಫೆ.7 ರಂದು ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಕೈಗೊಳ್ಳಲಾಗಿದೆ.

ಕಳೆದ 2017ರಲ್ಲಿ ಪ್ರಥಮ ಸಮಾವೇಶ ನಡೆದಿದ್ದು ೨ನೇ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಸಚಿವರು ಭಾಗವಹಿಸಲಿದ್ದು, ರಾಜ್ಯದ ವಿವಿಧೆಡೆಯಿಂದ 7-8 ಸಾವಿರ ಮಂದಿ ಅರ್ಚಕ-ಆಗಮಿಕರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಸಮಾವೇಶದಲ್ಲಿ ಅರ್ಚಕರ ಸಮಸ್ಯೆಗಳ ಪರಿಹಾರ ಮತ್ತು ನಗರದ ಇತರೆ ರಾಜ್ಯದಲ್ಲಿ ಇಲ್ಲದ 60 ವರ್ಷಗಳ ನಂತರ ನಿವೃತ್ತಿ ಎಂಬ ಕಾನೂನನ್ನು ಕೂಡಲೇ ವಾಪಸ್ಸು ಪಡೆಯುವುದು, ಗ್ರಾಮೀಣ ಭಾಗದ 36 ಸಾವಿರ ದೇವಾಲಯದ ಅರ್ಚಕ-ಆಗಮಿಕರಿಗೆ ಜೀವನ ನಿರ್ವಹಣೆಗೆ ಹಸುಗಳ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.