ಜಿಲ್ಲೆ

ಬಿಎಸ್‌ವೈ ರಾಜ್ಯ ಪ್ರವಾಸ ಮಾಡಿದರೆ ತಪ್ಪಿಲ್ಲ: ಸಚಿವ ಬೈರತಿ ಬಸವರಾಜ ಸಮರ್ಥನೆ

ದಾವಣಗೆರೆ: ಯಡಿಯೂರಪ್ಪನವರು ನಮ್ಮ ಹಿರಿಯ ನಾಯಕರು. ಪಕ್ಷ ಸಂಘಟನೆಗಾಗಿ ಅವರು ರಾಜ್ಯ ಪ್ರವಾಸ ಮಾಡಿದರೆ ತಪ್ಪೇನಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.

ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್‌ವೈ ಅವರ ಪ್ರವಾಸಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲ ನೀಡಲಿದ್ದಾರೆ ಎಂದರು.

ಸಚಿವ ಈಶ್ವರಪ್ಪ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ಸಹಜ ಪ್ರಕ್ರಿಯೆ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.

ದಾವಣಗೆರೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ

ಸೆ. 24 ರಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರು, ಶಾಸಕರು ಭಾಗವಹಿಸುವರು ಎಂದು ತಿಳಿಸಿದರು.

ಸೆ.2ಕ್ಕೆ ಜಿಲ್ಲೆಗೆ ಅಮಿತ್ ಷಾ

ಸೆ.2 ರಂದು ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದು, ಹರಿಹರ ತಾಲೂಕಿನ ಕೊಂಡಜ್ಜಿಯ ಪೊಲೀಸ್ ವಸತಿ ಶಾಲೆ ಸೇರಿದಂತೆ ಪೊಲೀಸ್ ಇಲಾಖೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಜತೆ ಅವರಿಗೆ ಮನವಿ ಸಲ್ಲಿಸಲಿರುವುದಾಗಿ ಹೇಳಿದರು.