ಹಾವೇರಿ: ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಹಾಗೂ ಬಡವರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಿದರು.
ಮಾಜಿ ಸಚಿವ ಬಸವರಾಜ ಶಿವಣ್ಣನವರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಆಹಾರದ ಕಿಟ್ ವಿತರಿಸಿ, ಯುವ ಕಾಂಗ್ರೆಸ್ನಿಂದ ನೀಡಿದ ಉಚಿತ ಆಂಬುಲೆನ್ಸ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕರೊನಾ ಸಮಯದಲ್ಲಿ ನಮ್ಮ ಪಕ್ಷದವರು ಏನೇನು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಆಹಾರ ಕಿಟ್ ಕೊಟ್ಟಿದ್ದಾರಾ, ಆಂಬುಲೆನ್ಸ್ ಕೊಟ್ಟಿದ್ದಾರಾ ಎಂಬುದನ್ನು ನೋಡುತ್ತಿದ್ದೇನೆ. ಇದರ ಜತೆಗೆ ರೈತರ ಸಮಸ್ಯೆ ಏನಿದೆ. ರೈತರು ಬೆಳೆದ ಬೆಳೆಗೆ ಬೆಲೆ ಸಿಗುತ್ತಿದೆಯೇ..? ಸರ್ಕಾರದ ನೆರವು ಸಿಕ್ಕಿದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದರು. ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿ ಕೊಟ್ಟು ಬಂದಿದ್ದೇನೆ. ರೈತರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಸರ್ಕಾರ ಘೊಷಿಸಿದ್ದ ನೆರವು ಸಹ ಇನ್ನೂ ಸಿಕ್ಕಿಲ್ಲ. ಇಂಥವರಿಗೆ ಸಹಾಯ ಮಾಡಬೇಕಿದೆ ಎಂದರು. ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ವಿಪ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾ ವಕ್ತಾರ ಡಾ. ಸಂಜಯ ಡಾಂಗೆ ಇತರರಿದ್ದರು.
ಲಾಕ್ಡೌನ್ ವಿತಸ್ತರಣೆ ಸರ್ಕಾರಕ್ಕೆ ಬಿಟ್ಟಿದ್ದು
ಜೂ. 7ರ ಬಳಿಕ ಲಾಕ್ಡೌನ್ ವಿಸ್ತರಣೆ ಮಾಡಲಾಗುತ್ತೋ ಇಲ್ಲವೋ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರದ ಬತ್ತಳಿಕೆಯಲ್ಲಿ ಏನಿದೆಯೋ, ತಜ್ಞರು ಏನು ವರದಿ ಕೊಟ್ಟಿದ್ದಾರೋ ಅವರಿಗೇ ಗೊತ್ತು. ಸರ್ಕಾರದವರು ಲಾಕ್ಡೌನ್ ವಿಸ್ತರಣೆ ಬಗ್ಗೆ ನಮ್ಮನ್ನು ಸಂರ್ಪಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಡಿ.ಕೆ. ಶಿವಕುಮಾರ ತಿಳಿಸಿದರು.
ಪರಸ್ಪರ ಅಂತರ ಮಾಯ: ಕರೊನಾ 2ನೇ ಅಲೆ ಗಂಭೀರವಾಗಿದ್ದರೂ ಹಾವೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮುಗಿಬಿದ್ದರು. ಕಿಟ್ ವಿತರಣೆ ಸಮಯದಲ್ಲಿ ಹಾಗೂ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗಲೂ ಪರಸ್ಪರ ಅಂತರ ಮರೆತಿದ್ದರು. ಕೆಲವರು ಮಾಸ್ಕ್ ಸಹ ಧರಿಸಿರಲಿಲ್ಲ.
ಆಪತ್ಬಾಂಧವ ವಾಹನಕ್ಕೆ ಚಾಲನೆ: ರಾಣೆಬೆನ್ನೂರ: ಇಲ್ಲಿಯ ಕಾಂಗ್ರೆಸ್ ತಾಲೂಕು ಸಮಿತಿ ವತಿಯಿಂದ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ರೋಗಿಗಳ ನೆರವಿಗಾಗಿ ನೀಡಿದ ಆಪತ್ಬಾಂಧವ ವಾಹನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೋಮವಾರ ಚಾಲನೆ ನೀಡಿದರು.
ನಂತರ ಕಾಂಗ್ರೆಸ್ ತಾಲೂಕು ಸಮಿತಿಯಿಂದ ಕೋವಿಡ್ ರೋಗಿಗಳ ಸೇವೆಗಾಗಿ ನೀಡಿದ ಆಕ್ಸಿಜನ್ ಬಸ್ ಹಾಗೂ ಜಿಲ್ಲಾಡಳಿತದಿಂದ ನೀಡಿದ ಆಕ್ಸಿಜನ್ ಬಸ್ಅನ್ನು ಪರಿಶೀಲಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಮಾತನಾಡಿ, ಆಪತ್ಬಾಂಧವ ವಾಹನ ಕೋವಿಡ್ ರೋಗಿಗಳ ಆರೈಕೆಗಾಗಿ ಆಸ್ಪತ್ರೆಗೆ ಬರುವ ಸಂಬಂಧಿಕರಿಗೆ, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ನಿತ್ಯವೂ ಊಟ, ಉಪಾಹಾರ ಸೇರಿ ಇತರ ವ್ಯವಸ್ಥೆ ಕಲ್ಪಿಸಲಿದೆ ಎಂದರು. ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಪ್ರಮುಖರಾದ ಚಂದ್ರಣ್ಣ ಬೇಡರ, ಎಂ.ಎಂ. ಹಿರೇಮಠ, ಮಂಜನಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ ಮತ್ತಿತರರು ಇದ್ದರು.
ಆಕ್ಸಿಜನ್ ಕೊಠಡಿ ಉದ್ಘಾಟನೆ: ತಾಲೂಕಿನ ಚಳಗೇರಿ ಗ್ರಾಮದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ವಿುಸಿದ ಆಕ್ಸಿಜನ್ ಕೊಠಡಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಉದ್ಘಾಟಿಸಿದರು.