ಸುಳ್ಳಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸೌಳ್ನಾಡು ಹಬ್ಬದಲ್ಲಿ ಜೀವಬಳಗ. 
ಜಿಲ್ಲೆ

ಪ್ರಭುತ್ವ ಪ್ರಾಯೋಜಿತ ಶೋಷಣೆ

Shivamogga - Desk - Praveena Kumar S

ಬ್ಯಾಕೋಡು: ಒಂದೇ ನದಿ ದಂಡೆಯ ಜನರನ್ನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕೆ ಬಲವಂತವಾಗಿ ಒಕ್ಕಲು ಎಬ್ಬಿಸುವುದು ಪ್ರಭುತ್ವ ಪ್ರಾಯೋಜಿತ ಶೋಷಣೆ ಎಂದು ಸಾಮಾಜಿಕ ಹೋರಾಟಗಾರ, ಲೇಖಕ ಜಿ.ಟಿ.ಸತ್ಯನಾರಾಯಣ ಹೆಳಿದರು.
ಸಾಗರ ತಾಲೂಕಿನ ಸುಳ್ಳಳ್ಳಿಯಲ್ಲಿ ಶನಿವಾರ ಸಂಜೆ ಜೀವಬಳಗ ಆಯೋಜಿಸಿದ ಸೌಳ್ನಾಡು ಹಬ್ಬದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿ, ಶರಾವತಿ ನದಿ ದಂಡೆಯ ನಾಗರಿಕತೆ ಇಂತಹ ಪ್ರಭುತ್ವಕ್ಕೆ ಪದೇಪದೆ ತುತ್ತಾಗುತ್ತಿದ್ದು ರಾಜ್ಯದ ಇತಿಹಾಸದಲ್ಲಿ ಎರಡೆರಡು ಬಾರಿ ಆಣೆಕಟ್ಟು ಕಟ್ಟಿ ನೆಲವನ್ನು ಮುಳುಗಿಸಲಾಗಿದೆ. ಅಲ್ಲದೆ ಮುಗಡೆಯಾದ ಮತ್ತು ಸ್ಥಳಾಂತರಗೂಂಡ ಜನರ ಬದುಕುವ ಹಕ್ಕುಗಳನ್ನು ಕಸಿಯಲಾಗುತ್ತಾ ಇದೆ ಎಂದರು.
ಮುಳುಗಡೆಯಿಂದ ಎಲ್ಲ ಕಳೆದುಕೊಂಡ ಜನರು ತಮ್ಮ ಜೀವನ ಪ್ರೀತಿ ಮತ್ತು ಆತ್ಮವಿಶ್ವಾಸ ಪುನಃ ಕಟ್ಟಿಕೊಂಡರೂ ಅವರ ಭೂಮಿ ಈಚೆಯ ದಶಕಗಳಲ್ಲಿ ಪುನಃ ನಡುಗುತ್ತ ಇದೆ. ಹಾಗಾದರೆ ಯಾವ ತಪ್ಪಿಗೆ ನದಿ ಪಾತ್ರದ ಜನರು ಶಿಕ್ಷೆ ಅನುಭವಿಸಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ ಎಂದು ಅವರು ವಿಷಾದಿಸಿದರು. ಶರಾವತಿ ನದಿಯ ಎಡ ದಂಡೆಯ ಘಟ್ಟ ಪ್ರದೇಶದ ತಪ್ಪಲಿನ ಜಾಗವನ್ನು ಸೌಳ್ನಾಡು ಎಂದು ಕರೆಯುತ್ತಾರೆ. ಕಾಡು ನಾಡಿನ ಜತೆ ಬದುಕು ಕಟ್ಟಿದ ಇಲ್ಲಿಯ ಸಮುದಾಯಗಳು ಹಾಡು, ಹಸೆಯ ಜನಪದ ಜೀವದ್ರವ್ಯವನ್ನು ಒಳಗೆ ತುಂಬಿಕೊಂಡೇ ಒಳಗೆ ಮತ್ತು ಹೊರಗೆ ಹೋರಾಡುತ್ತ ಇದ್ದಾರೆ. ಅಂಬಾರಗುಡ್ಡದ ಖನಿಜ ಸಂಪತ್ತು ಗಣಿ ಗುತ್ತಿಗೆದಾರರು ಕೊಳ್ಳೆ ಹೊಡೆಯಲು, ಭೂಮಿ ಅಗೆಯಲು ಬಂದಾಗ ಸರ್ಕಾರ ಪರವಾನಗಿ ಕೊಟ್ಟು ಸುಮ್ಮನೆ ಕುಳಿತಿತ್ತು. ಜನ ಹೋರಾಟ ಫಲವಾಗಿ ಉಳಿಸಿದ ಗುಡ್ಡದ ಹೆಸರಿನಲ್ಲಿ ಈಗ ಅರಣ್ಯ ಕಾನೂನು ನಿಯಮ ಬಾಹಿರವಾಗಿ ಜಾರಿಗೆ ತಂದು ಒಕ್ಕಲು ಎಬ್ಬಿಸಲು ಸರ್ಕಾರ ಮುಂದಾಗಿರುವುದು ಸಂತ್ರಸ್ತರ ಬದುಕುವ ಹಕ್ಕನ್ನು ಕಸಿಯುವ ಯತ್ನ ಎಂದು ಹೇಳಿದರು.
ಮುಳುಗಡೆಯ ನೋವುಗಳನ್ನ ದಾಖಲು ಮಾಡಿದ ನಾ. ಡಿಸೋಜ ಅವರಿಗೆ ಪಂಪ ಪ್ರಶಸ್ತಿ ದೊರೆತಿರುವುದಕ್ಕೆ ಸಂತ್ರಸ್ತರ ಪರವಾಗಿ ಅಭಿನಂದನೆ ತಿಳಿಸಿದ ಅವರು, ಡಿಸೋಜ ಕಾದಂಬರಿ ಇಲ್ಲದೇ ಇದ್ದಿದ್ದರೆ ಮುಳುಗಡೆ ನೋವು ಕಾಲದ ಕಾವಿಗೆ ಆವಿ ಆಗಿ ಹೋಗುತ್ತಿತ್ತು. ಒಬ್ಬ ಸಾಹಿತಿಗೆ ಇದ್ದ ನೋವು, ದಾಖಲು ಮಾಡುವ ಕಾಳಜಿ ಮುಳುಗಿಸಿದ ಸರ್ಕಾರಕ್ಕೆ ಇಲ್ಲದೇ ಇದ್ದದ್ದು ದುರಂತವಾಗಿದೆ ಎಂದರು.
ಜನಪದ ಸಿರಿವಂತಿಕೆ ಹೊಂದಿದ ದ್ವೀಪದ ಸೌಳ್ನಾಡು ಭೂಭಾಗ ಅದನ್ನು ವಾಸ್ತವದ ಜಗತ್ತನ್ನು ಎದುರಿಸಲು ಇಂಧನ ಆಗಿಸಿಕೊಂಡಿದೆ. ಜನರ ಬಂಡಾಯದ ಕಥನಗಳೇ ಜಾನಪದವಾದವು ಎನ್ನುವ ಮಾತಿಗೆ ಇವರ ಬದುಕು ಅನ್ವರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಸೌಳ್ನಾಡು ಹಬ್ಬ ಆಯೋಜನೆ ಅರ್ಥ ಪೂರ್ಣವಾದುದು ಎಂದು ವಿವರಿಸಿದರು.
ಸೌಳ್ನಾಡು ಹಬ್ಬವನ್ನು ಸ್ಥಳೀಯ ಸಿಗಂದೂರೇಶ್ವರಿ ಶಾಂತಿನಿಕೇತನ ಶಾಲೆಯ ಮಕ್ಕಳು ಸಾಮೂಹಿಕವಾಗಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ರಾತ್ರಿ ಏಳು ಗಂಟೆಗೆ ಹಬ್ಬ ಅಂಟಿಕೆ ಪಂಟಿಕೆ, ಭತ್ತ ಕುಟ್ಟುವ ಹಾಡು, ಲಾವಣಿ, ಕುಣುಬಿ ನೃತ್ಯ, ಕಾಲು ಪೂಜೆ ಹಾಡು, ಯಕ್ಷಗಾನ, ಕೋಲಾಟ, ಬೀಸಗಲ್ಲಿನ ಹಾಡು, ಜೋಗಿ ಪದ, ಮಕ್ಕಳ ಆಧುನಿಕ ನೃತ್ಯ, ರಸಮಂಜರಿ, ಗಾಡಿಗತನ ಮುಂತಾದ ಕಾರ್ಯಕ್ರಮ ಜತೆಗೆ ಕೊಡಚಾದ್ರಿ ಶಾಲೆಯ ಮಕ್ಕಳು ನಡೆಸಿಕೊಟ್ಟ ಮಲ್ಲಕಂಬ ಏರುವ ಸ್ಪರ್ಧೆ ಕಣ್ಮನ ಸೆಳೆಯಿತು.ಪ್ರಸಾದ್ ಸುಳ್ಳಳ್ಳಿ ನಿರ್ದೇಶನದ ಜೀವಬಳಗ ತಂಡ ಅಭಿನಯಿಸಿದ ಬಿಟ್ಟಿ ಬೀರ ನಾಟಕ ಪ್ರದರ್ಶನ ಬೆಳಗ್ಗಿನ ವರೆಗೂ ಪ್ರದರ್ಶನ ಕಂಡಿತು. ಸಾವಿರಕ್ಕೂ ಹೆಚ್ಚು ಜನ ಕೊರೆಯುವ ಚಳಿಯ ನಡುವೆ ಇಡೀ ರಾತ್ರಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.