ಜಿಲ್ಲೆ

ರಾಜ್ಯ ಪೊಲೀಸ್ ಶ್ವಾನ ದಳ ಬಲವರ್ಧನೆ

manjunathktgns

ಬೆಂಗಳೂರು: ರಾಜ್ಯ ಪೊಲೀಸ್ ಶ್ವಾನ ದಳಕ್ಕೆ ಹೊಸ 50 ಶ್ವಾನಗಳ ಸೇರ್ಪಡೆ ಸೇರಿದಂತೆ ದಳದ ಬಲವರ್ಧನೆಗೆ 2.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ್ ರಾವ್ ತಿಳಿಸಿದ್ದಾರೆ. ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪಡೆ (ದಕ್ಷಿಣ) ಕಚೇರಿ ಆವರಣದಲ್ಲಿ ಉನ್ನತೀಕರಿಸಿದ ‘ಶ್ವಾನ ಉದ್ಯಾನ’ಕ್ಕೆ ಮಂಗಳವಾರ ಚಾಲನೆ ನೀಡಿದರು.

ಸ್ಪೋಟಕ, ಮಾದಕ ವಸ್ತುಗಳು ಮತ್ತು ಅಪರಾಧಿಗಳ ಪತ್ತೆದಾರಿಕೆಯಲ್ಲಿ ಶ್ವಾನ ದಳವು ಮಹತ್ವದ ಪಾತ್ರ ವಹಿಸುತ್ತಿದೆ. ಈ ತಂಡವನ್ನು ಮತ್ತಷ್ಟು ಶಕ್ತಿಯುತವಾಗಿಸುವ ಉದ್ದೇಶದಿಂದ ಉತ್ತಮ ತರಬೇತಿ ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸಿಎಆರ್ ದಕ್ಷಿಣ ವಿಭಾಗ ಡಿಸಿಪಿ ಯೋಗೇಶ್ ಮತ್ತು ಎಸಿಪಿ ನಿಂಗಾ ರೆಡ್ಡಿ ನೇತೃತ್ವದ ತಂಡ ಶ್ವಾನ ಚಟುವಟಿಕೆ ಪಾರ್ಕ್ ಉನ್ನತೀಕರಿಸಿದೆ. ಡಾಗ್ ಗುರು ಎಂದೇ ಪ್ರಸಿದ್ಧರಾಗಿರುವ ಶ್ವಾನ ಮನೋತಜ್ಞ ಅಮೃತ್ ಹಿರಣ್ಣ ಸಲಹೆ ನೀಡಿದ್ದಾರೆ. ಶ್ವಾನ ದಳ ಬಲವರ್ಧನೆಗೆ ಅವರ ಸೇವೆಯನ್ನು ಇಲಾಖೆ ಪಡೆಯಲಿದೆ ಎಂದು ತಿಳಿಸಿದರು.

ವಿವಿಧ ತಳಿಗಳ 55 ಶ್ವಾನಗಳ ತಂಡ: ಸಿಬ್ಬಂದಿ ಶ್ರದ್ಧೆಯಿಂದ ಪಾರ್ಕ್ ನಿರ್ವಿುಸಿದ್ದಾರೆ. ಜರ್ಮನ್ ಶೆಪರ್ಡ್, ಲಾಬ್ರೆಡಾರ್, ಬೆಲ್ಜಿಯಂ ಮಾಲಿನೋಯಿಸ್, ಗೋಲನ್ಡ್ ರಿಟ್ರೇವರ್ ಹಾಗೂ ಡಾಬರ್​ವುನ್ ತಳಿಗಳ 55 ಶ್ವಾನಗಳಿವೆ. ಈ ದಳಕ್ಕೆ 50ಕ್ಕೂ ಹೆಚ್ಚಿನ ಶ್ವಾನಗಳನ್ನು ಸೇರ್ಪಡೆ ಮಾಡುವ ಯೋಜನೆಗೆ ಸರ್ಕಾರ ಅನುದಾನ ನೀಡಿದೆ. ಮಹಿಳಾ ಪೇದೆಗಳನ್ನೂ ಈ ದಳಕ್ಕೆ ನೇಮಿಸಲು ನಿರ್ಧರಿಸಲಾಗಿದೆ. ಸಿಎಆರ್ ಉತ್ತರ ವಿಭಾಗದಲ್ಲಿ ಕೂಡ ಶ್ವಾನ ದಳ ರಚಿಸಲಾಗುತ್ತದೆ ಎಂದು ಆಯುಕ್ತ ಭಾಸ್ಕರ್ ರಾವ್ ವಿವರಿಸಿದರು.